ಶಿರಸಿ:ಅತಿಯಾದ ಮಳೆಗೆ ಬಿತ್ತಿದ ಬೆಳೆ ಸರಿಯಾಗಿ ಬಂದಿಲ್ಲ ಎಂಬ ಕಾರಣಕ್ಕೆ ಮನನೊಂದ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡದ ಮುಂಡಗೋಡಿನಲ್ಲಿ ನಡೆದಿದೆ.
ಬಿತ್ತಿದ ಬೆಳೆ ನೀರುಪಾಲು: ಮನನೊಂದ ರೈತ ಸಾವಿಗೆ ಶರಣು - farmer commit suicide
ಹೊಲದಲ್ಲಿ ಬಿತ್ತಿದ್ದ ಜೋಳದ ಬೆಳೆ ಸುರಿದ ಮಳೆಯಿಂದಾಗಿ ನಾಶವಾಗಿದೆ ಎಂಬ ಕಾರಣಕ್ಕೆ ಮನನೊಂದ ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ.
ತಾಲೂಕಿನ ಓಣಿಕೆರೆ ಗ್ರಾಮದ ರೈತ ಚನ್ನಪ್ಪ ವಾಸನ (60) ಮೃತ ರೈತ. ತನ್ನ ನಾಲ್ಕು ಎಕರೆ ಹೊಲದಲ್ಲಿ ಮೆಕ್ಕೆಜೋಳ ಬೆಳೆ ಬೆಳೆದಿದ್ದು, ಮಳೆ ಅತಿಯಾದ ಕಾರಣ ಬೆಳೆ ನಷ್ಟವಾಗಿದೆ. ಈತ ಇಲ್ಲಿನ ಸಹಕಾರಿ ಸಂಘ ಸೇರಿದಂತೆ ಹಲವು ಕಡೆ ಕೈ ಸಾಲವನ್ನೂ ಮಾಡಿಕೊಂಡಿದ್ದು, ಸುಮಾರು 10 ಲಕ್ಷ ರೂ. ಸಾಲ ಇದೆ ಎನ್ನಲಾಗಿದೆ. ಇದೆಲ್ಲದರಿಂದಾಗಿ ಮನನೊಂದು ಸಾವಿಗೆ ಶರಣಾಗಿದ್ದಾನೆ ಎನ್ನಲಾಗಿದೆ.
ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಪರಿಶೀಲನೆ ನಡೆಸಿ ಅತಿವೃಷ್ಟಿಯಿಂದಲೇ ಬೆಳೆ ಹಾನಿಯಾಗಿ ಜೀವ ಕಳೆದುಕೊಂಡಿರುವುದು ಎನ್ನುವುದು ಸ್ಪಷ್ಟವಾದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿ ಪರಿಹಾರ ನೀಡುವ ಭರವಸೆ ನೀಡಿದರು.