ಕಾರವಾರ: ಜನಸಾಮಾನ್ಯರು, ಸೆಲೆಬ್ರಿಟಿಗಳ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ವಂಚನೆ ಮಾಡುವುದು ಎಲ್ಲೆಡೆ ಕಂಡು ಬರುತ್ತಿದೆ. ಆದರೆ ಇದೀಗ ಫೇಸ್ಬುಕ್ನಲ್ಲಿ ಉತ್ತರಕನ್ನಡ ಜಿಲ್ಲಾಧಿಕಾರಿ ಹೆಸರಿನ ಖಾತೆಯನ್ನೇ ತೆರೆದು ವಂಚನೆಗೆ ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.
ಜಿಲ್ಲಾಡಳಿತದ ನಕಲಿ ಫೇಸ್ಬುಕ್ ಖಾತೆ ತೆರೆದ ಖದೀಮರು "ಡೆಪ್ಯೂಟಿ ಕಮಿಷನರ್ ಉತ್ತರಕನ್ನಡ" ಎಂಬ ಹೆಸರಿನಲ್ಲಿ ಕಳೆದ ನಾಲ್ಕು ದಿನದ ಹಿಂದೆ ನಕಲಿ ಖಾತೆ ಸೃಷ್ಟಿ ಮಾಡಲಾಗಿದೆ. ಇದಕ್ಕೆ ಹಾಲಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರ ಫೋಟೋವನ್ನು ಬಳಸಲಾಗಿದೆ. ಅಲ್ಲದೇ ಈ ಫೇಸ್‌ಬುಕ್ ಕ್ರಿಯೆಟರ್ ಖಾತೆಯಿಂದ ವ್ಯಕ್ತಿಯೋರ್ವರಿಗೆ ಮೆಸೆಂಜರ್ನಲ್ಲಿ ಮೆಸೇಜ್ ಕಳುಹಿಸಲಾಗಿದೆ. ಸೇನಾಧಿಕಾರಿಯೊಬ್ಬರ ಗೃಹ ಬಳಕೆ ವಸ್ತುಗಳನ್ನ ತುರ್ತಾಗಿ ಮಾರಾಟ ಮಾಡಬೇಕಿದೆ ಎಂದು ಮೆಸೇಜ್ ಹಾಕಿ, ಹಣ ಪಡೆಯಲು ಯತ್ನಿಸಲಾಗಿದೆ. ಆದರೆ, ಈ ಸಂದೇಶದಿಂದ ಅನುಮಾನಗೊಂಡ ವ್ಯಕ್ತಿ ನನಗೆ ಫರ್ನಿಚರ್ ಬೇಡ ಎಂದು ಪ್ರತಿಕ್ರಿಯಿಸಿದ್ದಾರೆ.
ನ.3ರಂದು ಈ ಖಾತೆಯನ್ನ ಕ್ರಿಯೆಟ್ ಮಾಡಲಾಗಿದ್ದು, 111 ಫಾಲೋವರ್ಸ್ ಪಡೆದು 6 ಮಂದಿಯನ್ನು ಖಾತೆಯಿಂದ ಫಾಲೋ ಮಾಡಲಾಗುತ್ತಿದೆ. ಆದರೆ ಉತ್ತರಕನ್ನಡ ಜಿಲ್ಲಾಡಳಿತದ ಅಧಿಕೃತ "ಡೆಪ್ಯೂಟಿ ಕಮಿಷನರ್ ಉತ್ತರಕನ್ನಡ" ಫೆಸ್ಬುಕ್ ಖಾತೆಯಲ್ಲಿ 8.9 ಸಾವಿರ ಫಾಲೋವರ್ಸ್ ಇದ್ದಾರೆ. ಸದ್ಯ ನಕಲಿ ಖಾತೆಯನ್ನು ಡಿ ಆ್ಯಕ್ಟಿವೆಟ್ ಮಾಡಲಾಗಿದೆ.
ಇತ್ತೀಚಿನ ಘಟನೆ:ಪೊಲೀಸ್ ಠಾಣೆಯೊಂದರ ಫೇಸ್‌ಬುಕ್ ಖಾತೆ ಹ್ಯಾಕ್ ಮಾಡಿದ ಅಪರಿಚಿತ ದುಷ್ಕರ್ಮಿಗಳು ಅಶ್ಲೀಲ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದ ಘಟನೆ ಹೈದರಾಬಾದ್ನಲ್ಲಿ ಕೆಲದಿನಗಳ ಹಿಂದೆ ನಡೆದಿತ್ತು. ಹೈದರಾಬಾದ್ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಆಸಿಫ್‌ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಫೇಸ್‌ಬುಕ್ ಅಕೌಂಟ್ ಚೆಕ್ ಮಾಡಿದಾಗ ಈ ವಿಷಯ ತಿಳಿದು ಬಂದಿತ್ತು. ಕೂಡಲೇ ಎಚ್ಚೆತ್ತ ಪೊಲೀಸರು ಖಾತೆ ಸ್ಥಗಿತಗೊಳಿಸಿದ್ದರು.
"ಆಸಿಫ್‌ನಗರ ಠಾಣೆಯ ಕಾನ್ಸ್ಟೇಬಲ್ ಠಾಣೆಯ ಅಧಿಕೃತ ಫೇಸ್ಬುಕ್ ಖಾತೆ ಲಾಗ್ಇನ್ ಆಗಲು ಯತ್ನಿಸಿದ್ದ ವೇಳೆ ಸಾಧ್ಯವಾಗಿರಲಿಲ್ಲ. ಕೆಲ ನಿಮಿಷಗಳ ನಂತರ ಮತ್ತೆ ಲಾಗಿನ್ ಆಗಲು ಪ್ರಯತ್ನಿಸಿದ್ದರು ಆಗ ಕೂಡ ಸಮಸ್ಯೆ ಕಂಡು ಬಂದಿತ್ತು. ಬಳಿಕ ತಮ್ಮ ಫೋನ್‌ನಲ್ಲಿ ಖಾತೆ ಪರಿಶೀಲಿಸಿದಾಗ ಐದು ಅಶ್ಲೀಲ ವಿಡಿಯೋಗಳನ್ನು ಅಪ್ಲೋಡ್ ಮಾಡಿರುವುದು ಕಂಡು ಬಂದಿತ್ತು. ಕೂಡಲೇ ಮೇಲಧಿಕಾರಿಗಳಿಗೆ ವಿಷಯ ತಿಳಿಸಿ, ಅಕೌಂಟ್ ಹ್ಯಾಕ್ ಆಗಿರುವುದು ಪತ್ತೆಯಾಗಿತ್ತು. 6,000 ಕ್ಕೂ ಹೆಚ್ಚು ಮಂದಿ ಖಾತೆಯನ್ನು ಫಾಲೋವ್ ಮಾಡುತ್ತಿದ್ದರು ಎಂದು ಇನ್ಸ್ಪೆಕ್ಟರ್ ಎಸ್ ನವೀನ್ ಮಾಹಿತಿ ನೀಡಿದ್ದರು.
ಇದನ್ನೂ ಓದಿ:ರಿವಾರ್ಡ್ ವೆಬ್ಸೈಟ್ಗೆ ಕನ್ನ ಹಾಕಿದ್ದ ಚಾಲಾಕಿ: ಆಂಧ್ರ ಮೂಲದ ಆರೋಪಿ ಅರೆಸ್ಟ್, 4 ಕೋಟಿಗೂ ಹೆಚ್ಚು ಮೌಲ್ಯದ ವಸ್ತುಗಳು ವಶಕ್ಕೆ