ಕಾರವಾರ: ಸುಳ್ಳು ಜಾತಿ ಪ್ರಮಾಣಪತ್ರ ನೀಡಿ ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನ ಅಲಂಕರಿಸಲಾಗಿದೆ ಎಂಬ ದೂರಿನ ವಿಚಾರಣೆ ನಡೆಸಿದ ಭಟ್ಕಳ ಉಪವಿಭಾಗಾಧಿಕಾರಿ ನ್ಯಾಯಾಲಯ ಆದೇಶ ಪ್ರಕಟಿಸಿದೆ. ಅಧ್ಯಕ್ಷೆ ಜಯಶ್ರೀ ಮೊಗೇರ್ ನೀಡಿದ ಅನುಸೂಚಿತ ಜಾತಿ ಪ್ರಮಾಣ ಪತ್ರವನ್ನು ರದ್ದುಗೊಳಿಸುವಂತೆ ಭಟ್ಕಳ ತಹಶಿಲ್ದಾರ್ಗೆ ಆದೇಶಿಸಿದೆ.
ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಕೆ ಆರೋಪ ಭಟ್ಕಳದ ಬೆಳ್ನಿಯ ಜಯಶ್ರೀ ಮೊಗೇರ್ ತಾವು ಅನುಸೂಚಿತ ಮೊಗೇರ್ ಜಾತಿಗೆ ಸೇರಿದವರು ಎಂದು ಭಟ್ಕಳ ತಹಶಿಲ್ದಾರರಿಂದ ಪ್ರಮಾಣ ಪತ್ರವನ್ನು ಪಡೆದಿದ್ದರು. ಅದರಂತೆ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಬಳಿಕ ಉತ್ತರಕನ್ನಡ ಜಿಲ್ಲೆಯ ಜಿ. ಪಂ. ಅಧ್ಯಕ್ಷ ಸ್ಥಾನ ಅನುಸೂಚಿತ ಜಾತಿಗೆ ಮೀಸಲಾಗಿದ್ದರಿಂದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಆದರೆ ಜಯಶ್ರೀ ಈವರೆಗೆ ಸಲ್ಲಿಸಿರುವುದು ಸುಳ್ಳು ಪ್ರಮಾಣ ಪತ್ರ. ಅವರು ನೈಜ ಪರಿಶಿಷ್ಟ ಜಾತಿಗೆ ಸೇರಿಲ್ಲ. ಆದರೂ ಸುಳ್ಳು ಪ್ರಮಾಣಪತ್ರ ನೀಡಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದು, ಅವರ ಪ್ರಮಾಣಪತ್ರವನ್ನು ರದ್ದುಗೊಳಿಸುವಂತೆ ನಾರಾಯಣ ಶಿರೂರು ಎಂಬುವರು ದೂರು ದಾಖಲಿಸಿದ್ದರು.
ಅದರಂತೆ ಪ್ರಕರಣದ ವಿಚಾರಣೆ ನಡೆಸಿದ ಭಟ್ಕಳ ಉಪವಿಭಾಗಾಧಿಕಾರಿ ಸಾಜಿದ್ ಅಹಮದ್ ಮುಲ್ಲಾ, ಜಯಶ್ರೀ ಮೊಗೇರ ತಾವು ಅನುಸೂಚಿತ ಜಾತಿಗೆ ಸೇರಿದವರೆಂಬ ಬಗ್ಗೆ ಸಾಬೀತು ಪಡಿಸುವ ಬಗ್ಗೆ ದಾಖಲೆ ಅಥವಾ ಪುರಾವೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ವಿಫಲರಾಗಿದ್ದಾರೆ. ಮೊಗೇರ್ ಜಾತಿ ಹಿಂದುಳಿದ ವರ್ಗಕ್ಕೆ ಸೇರುವುದರಿಂದ ಜಯಶ್ರೀ ಮೊಗೇರ್ ಅವರ ಜಾತಿ ಪ್ರಮಾಣಪತ್ರವನ್ನು ರದ್ದುಪಡಿಸುವಂತೆ ತಹಶಿಲ್ದಾರ್ಗೆ ಆದೇಶಿಸಿದ್ದಾರೆ.
ಇನ್ನು, ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಜಯಶ್ರೀ ಮೊಗೇರ್, ನಮ್ಮಮೊಗೇರ್ಸಮಾಜ ಅನುಸೂಚಿತ ಜಾತಿಗೆ ಸೇರುತ್ತದೆ ಎಂಬ ಬಗ್ಗೆ ಹೈಕೋರ್ಟ್ ಮೊರೆ ಹೋಗಿದ್ದು, ವಿಚಾರಣೆ ಕೂಡ ನಡೆಯುತ್ತಿದೆ. ಆದರೆ ಈ ನಡುವೆ ಭಟ್ಕಳ ಉಪವಿಭಾಗಾಧಿಕಾರಿಗಳು ನನ್ನ ಜಾತಿ ಪ್ರಮಾಣಪತ್ರ ರದ್ದುಪಡಿಸಲು ಆದೇಶಿದ್ದಾರಂತೆ. ಆದರೆ ಈ ಬಗ್ಗೆ ಯಾವುದೇ ಆದೇಶದ ಪ್ರತಿ ನನಗೆ ತಲುಪಿಲ್ಲ ಎಂದು ತಿಳಿಸಿದ್ದಾರೆ.