ಭಟ್ಕಳ:ನಟ ಪುನೀತ್ ರಾಜಕುಮಾರ್ ನಿಧನದ ಬಳಿಕ ರಾಜ್ಯದ ವಿವಿಧೆಡೆ ನೇತ್ರದಾನಕ್ಕಾಗಿ ನೋಂದಣಿ ಹೆಚ್ಚಾಗಿದೆ.
ದಿ.ಅಪ್ಪು ಸ್ಮರಣಾರ್ಥ, 'ಕಣ್ಣುಗಳನ್ನು ದಾನ ಮಾಡಿ, ದೃಷ್ಟಿಯನ್ನು ಕೊಡುಗೆಯಾಗಿ ನೀಡಿ' ಎಂಬ ಅವರದ್ದೇ ಹೇಳಿಕೆಯನ್ನೇ ಘೋಷವಾಕ್ಯವಾಗಿಸಿ ಭಟ್ಕಳದಲ್ಲಿ ಬೃಹತ್ ನೇತ್ರದಾನ ನೋಂದಣಿ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಈ ಶಿಬಿರದಲ್ಲಿ 2,500ಕ್ಕೂ ಹೆಚ್ಚು ಜನರು ತಮ್ಮ ಹೆಸರು ನೋಂದಣಿ ಮಾಡಿಕೊಳ್ಳುವ ಮೂಲಕ ಮತ್ತೊಬ್ಬರ ಬದುಕಿಗೆ ಬೆಳಕಾಗುವ ವಾಗ್ದಾನ ಮಾಡಿದರು.
ಸಾಮಾಜಿಕ ಕಾರ್ಯಗಳ ಮೂಲಕ ಗಮನ ಸೆಳೆಯುತ್ತಿರುವ ಭಟ್ಕಳದ ಸ್ಪಂದನ ಚಾರಿಟೇಬಲ್ ಟ್ರಸ್ಟ್ ಆಯೋಜಿಸಿದ್ದ ಈ ನೇತ್ರದಾನ ನೋಂದಣಿ ಶಿಬಿರಕ್ಕೆ ಸ್ಥಳೀಯ 20ಕ್ಕೂ ಹೆಚ್ಚು ಸಂಘ-ಸಂಸ್ಥೆಗಳು ಸಹಕಾರ ನೀಡಿದ್ದವು. ಉಡುಪಿಯ ಪ್ರಸಾದ್ ಸೂಪರ್ ಸ್ಪೆಷಾಲಿಟಿ ನೇತ್ರಾಲಯದ ಸಹಯೋಗದೊಂದಿಗೆ ಭಟ್ಕಳದ ತಾಲೂಕು ಆಸ್ಪತ್ರೆಯಲ್ಲಿ ಈ ನೋಂದಣಿ ಕಾರ್ಯ ನಡೆಯಿತು. ಅನೇಕ ಸಂಘ-ಸಂಸ್ಥೆಗಳು, ಯುವಕ- ಯುವತಿ ಮಂಡಲಗಳು ಗುಂಪಾಗಿ ಬಂದು ನೋಂದಾಯಿಸಿದರೆ, ಸರ್ಕಾರಿ ನೌಕರರು, ಕಾಲೇಜು ವಿದ್ಯಾರ್ಥಿಗಳು, ಹೆಚ್ಚಿನ ಸಂಖ್ಯೆಯ ಯುವಕ- ಯುವತಿಯರು ಈ ಶಿಬಿರದಲ್ಲಿ ಕುಟುಂಬಸಮೇತರಾಗಿ ಹೆಸರು ನೋಂದಣಿ ಮಾಡಿಸಿದರು.