ಶಿರಸಿ (ಉತ್ತರ ಕನ್ನಡ) :ಸನಾತನ ಧರ್ಮದ ಸರಿಯಾದ ವ್ಯಾಖ್ಯಾನವನ್ನು ಜನರಿಗೆ ತಿಳಿಸಬೇಕು. ಒಂದೊಮ್ಮೆ ಅದು ಮನುಕುಲ, ಸಮಾಜಕ್ಕೆ ಒಳ್ಳೆಯದು ಮಾಡುತ್ತದೆ ಎಂದಾದರೆ ಒಪ್ಪಬಹುದು. ಆದರೆ, ಜನವಿರೋಧಿ ಅಂಶಗಳಿದ್ದರೆ ವಿರೋಧಿಸಬೇಕು ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್ ಎನ್ ನಾಗಮೋಹನದಾಸ್ ಹೇಳಿದರು.
ಶಿರಸಿಯಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸನಾತನ ಧರ್ಮದ ವಿಷಯವಾಗಿ ಗೊಂದಲ ಸೃಷ್ಟಿಸುವ ಬದಲು ಅದರ ಬಗ್ಗೆ ಜನಸಾಮಾನ್ಯರಿಗೆ ವ್ಯಾಖ್ಯಾನಿಸುವ ಗುರುತರ ಜವಾಬ್ದಾರಿ ಸನಾತನದ ಪರ ನಿಂತವರ ಮೇಲಿದೆ. ಸನಾತನ ಧರ್ಮದ ಬಗ್ಗೆ ಸರಿಯಾದ ವ್ಯಾಖ್ಯಾನ ಈವರೆಗೆ ಇಲ್ಲ. ಹೀಗಾಗಿ ಗೊಂದಲಮಯ ವಾತಾವರಣ ಸೃಷ್ಟಿಯಾಗಿದೆ. ಇಂಥ ಕಾಲಘಟ್ಟದಲ್ಲಿ ಸನಾತನ ಧರ್ಮದ ಪರ ನಿಂತವರು ಅದರ ಸರಿಯಾದ ವ್ಯಾಖ್ಯಾನ ತಿಳಿಸಬೇಕು ಎಂದರು.
ಸಂವಿಧಾನದ ಪೀಠಿಕೆಗೆ 42ನೇ ತಿದ್ದುಪಡಿ ಆಧಾರದ ಮೇಲೆ ಸೇರಿಸಿರುವ ಜಾತ್ಯತೀತ, ಸಮಾಜವಾದ ಹಾಗೂ ದೇಶದ ಐಕ್ಯತೆ ಪದಗಳನ್ನು ಕೇಂದ್ರ ಸರ್ಕಾರ ತೆಗೆದು ಸಂವಿಧಾನ ಪೀಠಿಕೆ ಹಂಚಿರುವುದು ತಪ್ಪು ಕೆಲಸ. ಇದು ಆಕಸ್ಮಿಕ ಅಥವಾ ಕಣ್ತಪ್ಪಿನಿಂದಾದ ಕೆಲಸವಲ್ಲ. ಬದಲಾಗಿ ಉದ್ದೇಶ ಪೂರ್ವಕವಾಗಿ ಮಾಡಿದ ಕಾರ್ಯ. ಇದು ಖಂಡನೀಯ. ಸರ್ಕಾರವು ಇನ್ನು ಮುಂದೆ ಇಂಥ ಗುರುತರ ತಪ್ಪು ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು.
ಕಳೆದ ಬಿಜೆಪಿ ಸರ್ಕಾರದ ಅವಧಿಯ ಕಾಮಗಾರಿಗಳಲ್ಲಿ ಆಗಿದೆ ಎನ್ನಲಾದ 40 ಪರ್ಸಂಟೇಜ್ ಹಗರಣದ ತನಿಖೆಯು ಆಯೋಗದ ಮೂಲಕ ಇನ್ನಷ್ಟೇ ಆರಂಭವಾಗಬೇಕು. ಸರ್ಕಾರ ನೀಡಿದ ಆದೇಶದಲ್ಲಿ ಕೆಲವು ಅಸ್ಪಷ್ಟತೆಯಿದೆ. ಅವುಗಳನ್ನು ಸರಿಪಡಿಸಿಕೊಂಡು ಬರುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅದು ಬಂದ ಬಳಿಕ ಪ್ರಕರಣದ ಮಾಹಿತಿ ಸಂಗ್ರಹಿಸಿ, ಸತ್ಯ ಹೊರತರಲು ಪ್ರಯತ್ನಿಸಲಾಗುವುದು ಎಂದರು.