ಗೋವಾಗೆ ಸಾಗಿಸುತ್ತಿದ್ದದ್ದು ಮದ್ಯಕ್ಕೆ ಬಳಸುವ ಸ್ಪಿರಿಟ್: ಅಕ್ರಮದ ಲಾರಿ ಬಿಡಿಸಲು ಶಾಸಕರು ಮುಂದಾಗಿದ್ದೇಕೆ ಬಿಜೆಪಿ ಪ್ರಶ್ನೆ! ಕಾರವಾರ(ಉತ್ತರಕನ್ನಡ): ಕರ್ನಾಟಕ-ಗೋವಾ ರಾಜ್ಯಗಳ ಗಡಿಯಲ್ಲಿ ಕಾರ್ಖಾನೆ ಬಳಕೆಗೆಂದು ಸಂಶಯಾಸ್ಪದವಾಗಿ ತೆಗೆದುಕೊಂಡು ಹೋಗುತ್ತಿದ್ದ ಸ್ಪಿರಿಟ್ ಟ್ಯಾಂಕರನ್ನು ಇತ್ತೀಚೆಗೆ ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಎರಡು ದಿನದಿಂದ ಟ್ಯಾಂಕರನ್ನು ಚೆಕ್‌ಪೋಸ್ಟ್‌ನಲ್ಲಿಯೇ ಇಟ್ಟುಕೊಂಡಿದ್ದಕ್ಕೆ ಶಾಸಕ ಸತೀಶ್ ಸೈಲ್ ಅವರು ಅಧಿಕಾರಿಗಳ ವಿರುದ್ದ ಕಿಡಿಕಾರಿದ್ದರು.
ಕಾರವಾರ ತಾಲೂಕಿನ ಗೋವಾ ಗಡಿಯ ಮಾಜಾಳಿ ಚೆಕ್‌ಪೋಸ್ಟ್‌ನಲ್ಲಿ ನವೆಂಬರ್ 4ರಂದು ಸ್ಪಿರಿಟ್ ಟ್ಯಾಂಕರ್ ಲಾರಿ ವಶಕ್ಕೆ ಪಡೆಯಲಾಗಿತ್ತು. ಶಾಸಕ ಸತೀಶ್ ಸೈಲ್ ಹಾಗೂ ಅಬಕಾರಿ ಇಲಾಖೆ ಅಧಿಕಾರಿಯ ನಡುವೆ ಜಟಾಪಟಿಯೂ ನಡೆದಿತ್ತು. ಲಾರಿ ಹಾಗೂ ಚಾಲಕನನ್ನು ವಶಕ್ಕೆ ಪಡೆದಿದ್ದೇಕೆ, ಬೇಕಿದ್ದರೆ ಕೇಸ್ ದಾಖಲಿಸಿ ಎಂದು ಶಾಸಕ ಸತೀಶ್ ಸೈಲ್ ಹೇಳಿದ್ದರು.
ಸ್ಪಿರಿಟ್ ಅನ್ನು ಕಾರ್ಖಾನೆ ಬಳಕೆಗೆಂದು ತೆಗೆದುಕೊಂಡು ಹೋಗುತ್ತಿದ್ದರು. ಆದರೆ ಇದು ಮದ್ಯ ತಯಾರಿಕೆಗೆ ಬಳಸುವ ಸ್ಪಿರಿಟ್ ಆಗಿದೆಯೇ ಎಂಬ ಅನುಮಾನವಿದೆ. ಈ ಕಾರಣದಿಂದ ಪ್ರಯೋಗಾಲಯಕ್ಕೆ ವರದಿ ಕಳುಹಿಸಿದ್ದೇವೆ. ವರದಿ ಬಂದ ನಂತರ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಶಾಸಕರಿಗೆ ತಿಳಿಸಿದ್ದರು.
ಮದ್ಯ ತಯಾರಿಕೆಗೆ ಅಕ್ರಮವಾಗಿ ಸ್ಪಿರಿಟ್ ಸಾಗಾಟ: ಸದ್ಯ ಪ್ರಯೋಗಾಲಯದಿಂದ ವರದಿ ಬಂದಿದೆ. ಆ ಸ್ಪಿರಿಟ್ ಅನ್ನು ಮದ್ಯ ತಯಾರಿಕೆಗೆ ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎಂಬುದು ಖಚಿತವಾಗಿದೆ. ಬೀದರ್ ಮೂಲದ ರವೀಂದ್ರ ಡಿಸ್ಟಿಲರಿ ವಿರುದ್ಧ ಅಬಕಾರಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ. 35 ಲಕ್ಷ ರೂ ಮೌಲ್ಯದ ಟ್ಯಾಂಕರ್ ಹಾಗೂ ಟ್ಯಾಂಕರ್‌ನಲ್ಲಿದ್ದ 18 ಲಕ್ಷ ರೂ ಮೌಲ್ಯದ 30 ಸಾವಿರ ಲೀಟರ್ ಸ್ಪಿರಿಟ್ ಅನ್ನ ಜಪ್ತಿ ಮಾಡಲಾಗಿದೆ. ಈ ಸ್ಪಿರಿಟ್‌ನಿಂದ ಅಂದಾಜು 3.66 ಕೋಟಿ ಮೌಲ್ಯದಷ್ಟು ಮದ್ಯ ತಯಾರಿಸಬಹುದಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಸ್ಪಿರಿಟ್ ಸಾಗಾಟವಾಗುತ್ತಿದ್ದ ಗೋವಾದ ಗ್ಲೋಬಲ್ ಕೆಮಿಕಲ್ಸ್ ಕಂಪನಿ ಸದ್ಯ ಸ್ಥಗಿತಗೊಂಡಿರುವುದು ಬೆಳಕಿಗೆ ಬಂದಿದೆ. ಸ್ಥಗಿತಗೊಂಡಿರುವ ಕಾರ್ಖಾನೆ ಹೆಸರಿನಲ್ಲಿ ಸ್ಪಿರಿಟ್ ಸಾಗಿಸುತ್ತಿದ್ದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿರುವುದಾಗಿ ಅಬಕಾರಿ ಡಿಸಿ ರೂಪಾ.ಎಂ ಮಾಹಿತಿ ನೀಡಿದರು.
ಇನ್ನೊಂದೆಡೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಸತೀಶ್ ಸೈಲ್ ವಿರುದ್ದ ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ. ಸ್ಪಿರಿಟ್ ಹಿಡಿದಿದ್ದಕ್ಕೆ ಸ್ಥಳೀಯ ಶಾಸಕರು ದೊಡ್ಡ ರಂಪಾಟ ಮಾಡಿದ್ದಾರೆ. ರಂಪಾಟದ ಹಿಂದೆ ಏನಿದೆ ಎಂಬುದು ಜನರಿಗೆ ಗೊತ್ತಾಗಬೇಕು. ಅಲ್ಲದೇ ಅಧಿಕಾರಿಗಳಿಗೆ ಅವರದೇ ಕರ್ತವ್ಯ ಇರುತ್ತದೆ. ಸ್ಪಿರಿಟ್ ಟ್ಯಾಂಕರ್ ಬಗ್ಗೆ ಇಷ್ಟೊಂದು ಆಸಕ್ತಿ ವಹಿಸಿ ಕಾರವಾರ ಶಾಸಕರು ಅಧಿಕಾರಿ ಮೇಲೆ ದರ್ಪ, ದೌರ್ಜನ್ಯ ನಡೆಸಿರುವುದೇಕೆ?. ಲಾರಿ ಮಾಲೀಕರು ಪ್ರಭಾವಿ ಮುಖಂಡರಾಗಿದ್ದು ಲಕ್ಷಾಂತರ ರೂಪಾಯಿ ಜಿ.ಎಸ್.ಟಿ ವಂಚನೆ ಮಾಡಿದ ಅನುಮಾನವಿದೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಮಾಜಿ ಶಾಸಕಿ ರೂಪಾಲಿ ನಾಯ್ಕ ಒತ್ತಾಯಿಸಿದ್ದಾರೆ.
ವಶಪಡಿಸಿಕೊಂಡ ಲಾರಿಯಲ್ಲಿದ್ದ ಸ್ಪಿರಿಟ್‌ನಿಂದ ಸುಮಾರು 3.60 ಕೋಟಿ ರೂ ಮೌಲ್ಯದ ಸಾರಾಯಿ ತಯಾರಿಕೆ ಮಾಡಬಹುದು ಎನ್ನಲಾಗಿದೆ. ಈ ಹಿಂದಿನಿಂದಲೂ ಇದೇ ರೀತಿಯ ಅಕ್ರಮ ಸಾಗಾಟ ಮಾಡುವ ದಂಧೆ ನಡೆಯುತ್ತಿತ್ತು ಎನ್ನಲಾಗಿದೆ.
ಇದನ್ನೂ ಓದಿ:ಶಿವಮೊಗ್ಗದಿಂದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ವರ್ಗಾವಣೆ