ಕಾರವಾರ:ಬಹುವರ್ಷದ ಬೇಡಿಕೆಯಂತೆ ಕಾರವಾರದಲ್ಲಿ ವೈದ್ಯಕೀಯ ಮಹಾವಿದ್ಯಾಲಯ ನಿರ್ಮಾಣಗೊಂಡರೂ ತುರ್ತು ಹಾಗೂ ಸಮರ್ಪಕ ಚಿಕಿತ್ಸೆ ಸಿಗದೆ ಸಾರ್ವಜನಿಕರು ಪರದಾಡುವಂತಾಗಿದ್ದು, ಶನಿವಾರ ತಡರಾತ್ರಿ ಕೂಡ ಇಂತಹುದೇ ಒಂದು ಘಟನೆ ನಡೆದಿದೆ.
ಅಂಕೋಲದ ಅಗ್ರಗೋಣದ ವನಿತಾ(10) ಎಂಬ ಮಗು ಮಿದುಳು ಜ್ವರದಂಥ ಕಾಯಿಲೆಯಿಂದ ಬಳಲುತ್ತಿದ್ದಳು. ಕಾಯಿಲೆ ಬಗ್ಗೆ ಸರಿಯಾದ ಮಾಹಿತಿ ಇರದ ಕಾರಣ ಮಾಮೂಲಿ ಜ್ವರವೆಂದು ಅಂದುಕೊಂಡಿದ್ದ ಪಾಲಕರು ಕುಮಟಾ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಿದ್ದರು. ಆದರೆ, ಅಲ್ಲಿನ ವೈದ್ಯರು ತಮ್ಮಿಂದ ಚಿಕಿತ್ಸೆ ಸಾಧ್ಯವಾಗುವುದಿಲ್ಲವೆಂದು ಮಂಗಳೂರಿಗೆ ಕರೆದೊಯ್ಯುವಂತೆ ಶಿಫಾರಸು ಮಾಡಿದ್ದು, ಬಡ ಪಾಲಕರು ಕೆಲವು ದಿನಗಳವರೆಗೆ ಮಂಗಳೂರಿನಲ್ಲಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಆರ್ಥಿಕ ಸಮಸ್ಯೆಯಿಂದಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ಶನಿವಾರ ಮಧ್ಯರಾತ್ರಿ 12.30ರ ಸುಮಾರಿಗೆ ಆಂಬುಲೆನ್ಸ್ ಮೂಲಕ ಮಗುವನ್ನು ಜಿಲ್ಲಾಸ್ಪತ್ರೆಗೆ ಕರೆ ತಂದಿದ್ದರು.
ದುರದೃಷ್ಟವಶಾತ್ ಆಸ್ಪತ್ರೆಯ ವೈದ್ಯರು ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಹೇಳಿ ಕೂಡಲೇ ಗೋವಾಕ್ಕೆ ಕರೆದೊಯ್ಯುವಂತೆ ಶಿಫಾರಸು ಮಾಡಿದ್ದಾರೆ. ಇದರಿಂದಾಗಿ ದಿಕ್ಕು ತೋಚದಂತಾದ ಮುಗ್ದ, ಬಡ ಪಾಲಕರು ಮಾಜಿ ಶಾಸಕ ಸತೀಶ್ ಸೈಲ್ ಅವರ ಬಳಿ ಸಹಾಯಕ್ಕಾಗಿ ಫೋನಾಯಿಸಿದ್ದಾರೆ. ತಕ್ಷಣವೇ ಸತೀಶ್ ಸೈಲ್ ಜಿಲ್ಲಾಸ್ಪತ್ರೆಗೆ ಆಗಮಿಸಿ ಮಗುವಿನ ಪರಿಸ್ಥಿತಿ ಕಂಡು ಮರುಗಿದರು. ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಂಡು ಚಿಕಿತ್ಸೆ ಕೊಡಿಸುವಂತೆ ವೈದ್ಯರ ಬಳಿ ಮನವಿ ಮಾಡಿಕೊಂಡರು.