ಕಾರವಾರ: ಕೊರೊನಾ ಪರಿಸ್ಥಿತಿ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಸಚಿವ ಹಾಗೂ ಹಳಿಯಾಳ ಶಾಸಕ ಆರ್.ವಿ ದೇಶಪಾಂಡೆ ಕಿಡಿಕಾರಿದರು.
ಕಾರವಾರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಜೀವಂತವಾಗಿಲ್ಲ, ಯಾವುದೇ ಸಚಿವರಿಗೆ ವಿರೋಧ ಪಕ್ಷದ ನಾಯಕರಾಗಿ ನಾವು ಪತ್ರ ಬರೆದರೂ ಅದಕ್ಕೆ ಉತ್ತರ ಕೊಡುತ್ತಿಲ್ಲ. ಜನ ಸಾಮಾನ್ಯರು ಇಂತಹ ನಡೆಯಿಂದ ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದರು.
ಸರ್ಕಾರ ಘೋಷಣೆ ಮಾಡಿರುವ ಪ್ಯಾಕೇಜ್ನಲ್ಲಿ ಕೆಲವು ವರ್ಗದವರಿಗೇ ಮಾತ್ರ ಧನಸಹಾಯ ನೀಡಲಾಗಿದೆ. ಮೀನುಗಾರರನ್ನೂ ಪ್ಯಾಕೇಜ್ನಲ್ಲಿ ಒಳಪಡಿಸಬೇಕು. ಸರ್ಕಾರದ ಮಂತ್ರಿಗಳೇ ಮುಖ್ಯಮಂತ್ರಿಗಳ ವಿರುದ್ದ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಅದು, ಅವರ ಆಂತರಿಕ ವಿಚಾರ ಆಗಿರಬಹುದು. ಆದರೆ, ಅದರ ದುಷ್ಪರಿಣಾಮ ಬೀರುವುದು ಮಾತ್ರ ಜನರ ಮೇಲೆ ಎಂದು ದೂರಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಆರ್.ವಿ ದೇಶಪಾಂಡೆ ಇದನ್ನೂ ಓದಿ: ಕಾಂಗ್ರೆಸ್‌ಗೆ ಲಸಿಕೆ ವಿತರಿಸಲು ಅನುಮತಿ ನೀಡಬೇಕು: ಸರ್ಕಾರಕ್ಕೆ ಡಿ.ಕೆ.ಶಿವಕುಮಾರ್ ಮನವಿ
ಮಾಜಿ ಸಚಿವ ಮೇಟಿಯವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಾಗ ನಮ್ಮ ಸರ್ಕಾರ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿರಲಿಲ್ಲ. ಆದರೆ, ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣವನ್ನು ಈಗಿನ ಸರ್ಕಾರ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.