ಕರ್ನಾಟಕ

karnataka

ETV Bharat / state

ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ವೃಕ್ಷಮಾತೆ ಅಂಕೋಲದ ತುಳಸಿ ಗೌಡ - Padma awards

ಕಳೆದ 35 ವರ್ಷಗಳಿಂದ ಗಿಡಗಳನ್ನು ನೆಟ್ಟು ಪೋಷಣೆ ಮಾಡುತ್ತಾ ಪರಿಸರ ಪ್ರೇಮವನ್ನು ಬೆಳೆಸಿಕೊಂಡು ಬಂದಿರುವ ತುಳಸಿ ಗೌಡ ಅವರ ಸೇವೆಗೆ ಇದೀಗ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾಗಿರುವ ಪದ್ಮಶ್ರೀ ಪ್ರಶಸ್ತಿ ಮುಡಿಗೇರಿದೆ.

Tulsi Gowda receives Padma Shri from president
ತುಳಸಿಗೌಡ

By

Published : Nov 8, 2021, 11:49 PM IST

Updated : Nov 9, 2021, 4:56 PM IST

ಕಾರವಾರ: ಯಾವ ಫಲಾಪೇಕ್ಷೆಯೂ ಇಲ್ಲದೇ ದಶಕಗಳ ಕಾಲ ಗಿಡಗಳನ್ನು ನೆಟ್ಟು ತನ್ನದೇ ಮಕ್ಕಳಂತೆ ಪೋಷಿಸಿಕೊಂಡು ಹೆಮ್ಮರವಾಗಿಸಿದ ಅಂಕೋಲಾದ ತುಳಸಿ ಗೌಡ ಅವರಿಗೆ ದೇಶದ ಪ್ರತಿಷ್ಟಿತ ಪದ್ಮಶ್ರೀ ಪುರಷ್ಕಾರವನ್ನು ಸೋಮವಾರ ನವದೆಹಲಿಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ನೀಡಿ ಗೌರವಿಸಿದರು.

ವೃಕ್ಷಮಾತೆಯ ನಮಸ್ಕಾರ

ಕಳೆದ 35 ವರ್ಷಗಳಿಂದ ಗಿಡಗಳನ್ನು ನೆಟ್ಟು ಪೋಷಣೆ ಮಾಡುತ್ತಾ ಪರಿಸರ ಪ್ರೇಮವನ್ನು ಬೆಳೆಸಿಕೊಂಡು ಬಂದಿರುವ ತುಳಸಿ ಗೌಡ ಅವರ ಸೇವೆಗೆ ಇದೀಗ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾಗಿರುವ ಪದ್ಮಶ್ರೀ ಪ್ರಶಸ್ತಿ ಮುಡಿಗೇರಿದೆ.

ಹಾಲಕ್ಕಿ ಸಮುದಾಯದವರಾದ ತುಳಸಿ ಗೌಡ ಮೂಲತಃ ಅಂಕೋಲಾ ತಾಲ್ಲೂಕಿನ ಅಗಸೂರಿನ ಹೊನ್ನಳ್ಳಿ ಗ್ರಾಮದ ನಿವಾಸಿ. ಗ್ರಾಮದ ನಾರಾಯಣ ಹಾಗೂ ನೀಲಿ ದಂಪತಿಗೆ 1944ರಲ್ಲಿ ಜನಿಸಿದ ತುಳಸಿ ಗೌಡ ಬಡತನದ ಜೊತೆಗೆ ತನ್ನ ಎರಡನೇ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡು ಶಾಲೆ ಮೆಟ್ಟಿಲನ್ನು ಏರದೇ ತಾಯಿಯ ಜೊತೆ ಚಿಕ್ಕಂದಿನಿಂದಲೇ ಕೂಲಿ ಕೆಲಸಕ್ಕೆ ಮಾಡಲಾರಂಭಿಸಿದರು.

ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ವೃಕ್ಷಮಾತೆ

ಪರಿಸರ ಪ್ರೇಮ ಎನ್ನುವುದು ಈಕೆಗೆ ಹುಟ್ಟಿನಿಂದ ಬಂದಿತ್ತು. ಊರಿನವರ ಜೊತೆ ಕಟ್ಟಿಗೆ ತರುವ ಕೆಲಸವನ್ನ ಮಾಡಿ ಪ್ರತಿನಿತ್ಯ ಐದರಿಂದ ಆರು ರೂಪಾಯಿ ದುಡಿಯುತ್ತಿದ್ದ ತುಳಸಿ ಅವರಿಗೆ ಅರಣ್ಯ ಇಲಾಖೆ ಬೀಜಗಳನ್ನು ಶೇಖರಣೆ ಮಾಡಿ ಸಸಿಗಳನ್ನಾಗಿ ಮಾಡಿಕೊಡುವ ಕೆಲಸವನ್ನು ಹಚ್ಚಿತು. ಅಂದಿನಿಂದ ಗಿಡಗಳನ್ನು ಬೆಳೆಸುವ ಕಾಯಕ ಆರಂಭಿಸಿದ ತುಳಸಿ ಗೌಡ ಅವರ ಕೈಯಲ್ಲಿ ಇದುವರೆಗೆ ಲಕ್ಷಾಂತರ ಮರಗಳು ಬೆಳೆದು ನಿಂತಿವೆ. ಅವರ ಪರಿಸರ ಸೇವೆಗೆ ಇದೀಗ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಲಭ್ಯವಾಗಿದೆ.

ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ವೃಕ್ಷಮಾತೆ ತುಳಸಿ ಗೌಡ

ಇನ್ನು ತುಳಸಿ ಗೌಡರು ಮೊದಲು ಬೀಜಗಳನ್ನು ತಂದು ಸಸಿ ಮಾಡುವ ಕೆಲಸ ಪ್ರಾರಂಭಿಸಿದ್ದರು. ಕೇವಲ 1.25 ಪೈಸೆ ದಿನದ ಕೂಲಿಗೆ ಈ ಕೆಲಸವನ್ನು ಮಾಡುತ್ತಿದ್ದ ಅವರಿಗೆ ಕಡಿಮೆ ಕೂಲಿಗೆ ಸಸಿ ಮಾಡುವ ಕೆಲಸ ಬೇಡ ಎಂದು ಎಲ್ಲರೂ ಹೇಳಿದರೂ ಪರಿಸರ ಕಾಳಜಿಯಿಂದ ಅವರು ಕೆಲಸವನ್ನು ಮಾತ್ರ ನಿಲ್ಲಿಸಿರಲಿಲ್ಲ. ಅಷ್ಟೇ ಅಲ್ಲದೇ ತಾವು ಬೆಳೆಸಿದ ಸಸಿಗಳನ್ನ ಅರಣ್ಯ ಪ್ರದೇಶದಲ್ಲಿ, ಸರ್ಕಾರಿ ಕಚೇರಿ, ಶಾಲೆ, ರಸ್ತೆಗಳ ಪಕ್ಕದಲ್ಲಿ ನೆಡಲು ಪ್ರಾರಂಭಿಸಿದ್ದರು. ವರ್ಷಕ್ಕೆ ಸುಮಾರು 30 ಸಾವಿರ ಸಸಿಗಳನ್ನ ನೆಟ್ಟು ಪೋಷಿಸುವ ಕಾರ್ಯವನ್ನು ನಿರಂತರ ಮಾಡುತ್ತಾ ಬಂದಿದ್ದು, ಅವರು ನೆಟ್ಟು ಪೋಷಿಸಿದ ಸಸಿಗಳು ಇಂದು ಬೆಳೆದು ಹೆಮ್ಮರವಾಗಿ ಜನರಿಗೆ ಗಾಳಿ, ನೆರಳನ್ನ ನೀಡುತ್ತಿವೆ.

ಪ್ರಧಾನಿ ಮೋದಿ ಅವರೊಂದಿಗೆ ವೃಕ್ಷಮಾತೆ

ಇನ್ನು ತುಳಸಿ ಗೌಡರ ಸಾಧನೆಯನ್ನು ಮೆಚ್ಚಿ ಕೇಂದ್ರ ಸರ್ಕಾರದ ಪ್ರತಿಷ್ಠಿತ ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಎಲೆಮರೆಯ ಕಾಯಂತೆ ಪರಿಸರ ಸೇವೆ ಮಾಡಿದ ತುಳಸಿ ಗೌಡಗೆ ಇದೀಗ ಪದ್ಮಶ್ರೀ ಪ್ರಶಸ್ತಿ ಲಭಿಸಿರುವುದು ಕರುನಾಡಿಗೆ ಹೆಮ್ಮೆಯ ವಿಷಯವಾಗಿದೆ.

ಇದನ್ನು ಓದಿ: 'ನಾನು ಅಕ್ಷರ ಕಲಿಯದ ವ್ಯಕ್ತಿ': ಬಿಳಿ ಪಂಚೆ, ಶರ್ಟ್‌ ಧರಿಸಿ ಬರಿಗಾಲಲ್ಲೇ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ 'ಅಕ್ಷರಸಂತ'

Last Updated : Nov 9, 2021, 4:56 PM IST

ABOUT THE AUTHOR

...view details