ಕಾರವಾರ:ದಕ್ಷಿಣ ಕಾಶಿ ಗೋಕರ್ಣಕ್ಕೆ ಪ್ರಪಂಚದ ವಿವಿಧ ಭಾಗಗಳಿಂದ ವಿದೇಶಿ ಪ್ರವಾಸಿಗರು ಆಗಮಿಸುತ್ತಾರೆ. ಅದರಲ್ಲೂ ನವೆಂಬರ್, ಡಿಸೆಂಬರ್ ವೇಳೆಗೆ ಇಸ್ರೇಲ್ನಿಂದ ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿಯೇ ಗೋಕರ್ಣಕ್ಕೆ ಪ್ರವಾಸಿಗರು ಆಗಮಿಸುತ್ತಿದ್ದರು. ಆದರೆ, ಈ ಬಾರಿ ಇಸ್ರೇಲ್ - ಹಮಾಸ್ ನಡುವಿನ ಕದನದ ಎಫೆಕ್ಟ್ನಿಂದ ಗೋಕರ್ಣಕ್ಕೆ ಇಸ್ರೇಲ್ ನಿಂದ ಆಗಮಿಸುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ.
ಗೋಕರ್ಣ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ. ಶಿವನ ಆತ್ಮಲಿಂಗ ಇರುವ ಗೋಕರ್ಣವನ್ನು ದಕ್ಷಿಣ ಕಾಶಿ ಎಂದು ಕರೆಯಲಾಗುತ್ತದೆ. ಇನ್ನು ಗೋಕರ್ಣ ಕಡಲ ತೀರದಲ್ಲಿ ಕಾಲ ಕಳೆಯಲು ದೇಶದ ಪ್ರವಾಸಿಗರಿಗಿಂತಲೂ ಹೆಚ್ಚಾಗಿ ಪ್ರಪಂಚದ ವಿವಿಧ ಭಾಗಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಅದರಲ್ಲೂ ನವೆಂಬರ್ ತಿಂಗಳು ಪ್ರಾರಂಭವಾದರೇ ಇಸ್ರೇಲ್ ನಿಂದ ದೊಡ್ಡ ಸಂಖ್ಯೆಯಲ್ಲಿಯೇ ಪ್ರವಾಸಿಗರು ಗೋಕರ್ಣಕ್ಕೆ ಆಗಮಿಸುತ್ತಿದ್ದರು. ಆದರೆ, ಈ ಬಾರಿ ಹಮಾಸ್ ಹಾಗೂ ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧ ಪರಿಣಾಮ ಈ ದೇಶದ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿದಿದೆ. ಡಿಸೆಂಬರ್ ವೇಳೆಗೆ ಗೋಕರ್ಣದ ನಾನಾ ಭಾಗದಲ್ಲಿ ಸುಮಾರು ಸಾವಿರ ಸಂಖ್ಯೆಯಲ್ಲಿ ಇಸ್ರೇಲ್ನಿಂದ ಪ್ರವಾಸಿಗರು ಆಗಮಿಸುತ್ತಿದ್ದರು. ಆದರೆ, ಈ ಬಾರಿ ಬೆರಳೆಣಿಕೆಯಷ್ಟು ಪ್ರವಾಸಿಗರು ಮಾತ್ರ ಗೋಕರ್ಣದಲ್ಲಿ ಕಾಣುತ್ತಿದ್ದಾರೆ. ಯುದ್ಧದ ಪರಿಣಾಮ ಗೋಕರ್ಣದ ಪ್ರವಾಸೋದ್ಯಮದ ಮೇಲೆ ಭಾರಿ ಪರಿಣಾಮ ಬೀರಿದೆ.