ಕಾರವಾರ:ಶಾಲಾ ಮಕ್ಕಳ ಬೋಧನಾ ಹಿತದೃಷ್ಟಿಯಿಂದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರಿಗೆ ಮಾರ್ಚ್ವರೆಗೆ ಯಾವುದೇ ರೀತಿಯ ತರಬೇತಿ ಆಯೋಜಿಸದೆ ಕೇವಲ ಶಾಲೆಗಳಲ್ಲಿ ಪಾಠ ಹೇಳಲು ಮಾತ್ರ ಸೀಮಿತಗೊಳಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
ಹೊನ್ನಾವರದ ನ್ಯೂ ಇಂಗ್ಲಿಷ್ ಶಾಲೆಗೆ ಭೇಟಿ ನೀಡಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿಕ್ಷಕರ ಸಮಸ್ಯೆಯನ್ನು ಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದು ಅವರು ಹೇಳುವುದರಲ್ಲಿ ಅರ್ಥವಿದೆ. ತರಬೇತಿಗಳಿಂದಾಗಿ ಮಕ್ಕಳಿಗೆ ಸರಿಯಾಗಿ ಪಾಠ ಮಾಡಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ಮಾರ್ಚ್ ಅಂತ್ಯದವರೆಗೂ ಶಿಕ್ಷಕರಿಗೆ ಯಾವುದೇ ತರಬೇತಿ ನಡೆಸುವುದಿಲ್ಲ. ಈ ಸಮಯವನ್ನು ಕೇವಲ ಮಕ್ಕಳ ಪಾಠಕ್ಕಾಗಿ ಸೀಮಿತವಾಗಿಸುವಂತೆ ನಮ್ಮ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆಯುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಓದಿನೆಡೆಗೆ ಪ್ರೇರೆಪಿಸಲಾಗುತ್ತಿದೆ. ಕ್ವಿಜ್, ಕೌನ್ ಬನೆಗಾ ಕರೋಡ್ಪತಿ ಮಾದರಿಯಲ್ಲಿ ಕೌನ್ ಬನೆಗಾ ಗಣಿತಾಧಿಪತಿ ಎಂಬ ವಿಶಿಷ್ಟ ಚಟುವಟಿಕೆಗಳ ಮೂಲಕ ಮಕ್ಕಳು ಉತ್ತಮ ಅಂಕ ಪಡೆಯುವಂತಾಗಲು ಪ್ರಯೋಗ ನಡೆಸಲಾಗಿದ್ದು, ಕಲಿಕೆಯಲ್ಲಿ ಆಸಕ್ತಿ ತಂದು ಫಲಿತಾಂಶ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.