ಕಾರವಾರ (ಉ.ಕ): ದೇಶ - ವಿದೇಶ ಪ್ರವಾಸಿಗರ ಪಾಲಿನ ನೆಚ್ಚಿನ ತಾಣವೊಂದು ನಿರ್ವಹಣೆ ಇಲ್ಲದೇ ಅಂದ ಕಳೆದುಕೊಳ್ಳುತ್ತಿದೆ. ಮಾತ್ರವಲ್ಲದೇ ಹಣಕೊಟ್ಟು ತೆರಳುವ ಪ್ರವಾಸಿಗರಿಗೆ ತುಕ್ಕು ಹಿಡಿದು ಇನ್ನೇನು ಬೀಳುವ ಹಂತದಲ್ಲಿರುವ ಚಾವಣಿಗಳು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದು, ಪ್ರವಾಸಿಗರ ಬೇಸರಕ್ಕೂ ಕಾರಣವಾಗಿದೆ.
ತಾಲೂಕಿನ ಕಾಸರಕೋಡ್ ಬ್ಲ್ಯೂ ಫ್ಲಾಗ್ (Kasarakod Beach) ಮಾನ್ಯತೆಯ ಇಕೋ ಬೀಚ್ (Eco-beach of Karnataka) ಸನಿಹದಲ್ಲೇ ಇರುವ ಇಕೋ ಪಾರ್ಕ್ ಅಸಮರ್ಪಕ ನಿರ್ವಹಣೆಯಿಂದಾಗಿ (Inadequate management) ಅಂದ ಕಳೆದುಕೊಳ್ಳುತ್ತಿದೆ. ಇಕೋ ಪಾರ್ಕ್ನ ಸೌಂದರ್ಯ ಸವಿಯಲು ನೂರಾರು ಪ್ರವಾಸಿಗರು ನಿತ್ಯ ಆಗಮಿಸುತ್ತಾರೆ. ಆದರೆ, ಇಲ್ಲಿಯ ಸೌಂದರ್ಯ ಹೆಚ್ಚಿಸಲು ನಿರ್ಮಿಸಿದ ವಿವಿಧ ಕಲಾಕೃತಿಗಳು ಹಾನಿಯಾದರೂ ಅದರ ದುರಸ್ತಿಪಡಿಸುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗದಿರುವುದು ಪ್ರವಾಸಿಗರಿಗೆ ನಿರಾಸೆ ಮೂಡಿಸುತ್ತಿದೆ.
ಪಾರ್ಕ್ನಲ್ಲಿರುವ ಕುಟೀರಗಳು ಮುರಿದು ಬೀಳುವ ಹಂತಕ್ಕೆ ತಲುಪಿದ್ದು, ಕುಳಿತುಕೊಳ್ಳಲು ಹಾಕಿದ್ದ ಬೆಂಚುಗಳು ಅಪಾಯದ ಸ್ಥಿತಿಯಲ್ಲಿವೆ. ಪಾರ್ಕ್ನಲ್ಲಿ ಎಲ್ಲೆಂದರಲ್ಲಿ ಕಸ ಕಣ್ಣಿಗೆ ಬೀಳುತ್ತವೆ. ನೀರಿನ ಬಾಟಲಿ, ಪ್ಲಾಸ್ಟಿಕ್ ಎಸೆದು ಅಂದ ಕೆಡಿಸಲಾಗಿದೆ. ಶೌಚಾಲಯ ಸ್ಥಿತಿ ನೋಡಿದರೆ ಅತ್ತ ಸುಳಿಯುವುದೇ ಬೇಡವಾಗಿದೆ. ಪಾರ್ಕ್ನಲ್ಲಿ ಕುಡಿಯುವ ನೀರಿನ ವ್ಯವಸ್ಥೆಯೂ ಸರಿಯಾಗಿಲ್ಲ.