ಭಟ್ಕಳ: ಉತ್ತರಕನ್ನಡ ಜಿಲ್ಲೆಯ ಭಟ್ಕಳದ ಸಾಗರ ರಸ್ತೆಯಲ್ಲಿರುವ ಅಗ್ನಿಶಾಮಕ ಠಾಣೆಯ ಆವರಣ ಯಾವುದೋ ಉದ್ಯಾನದ ರೀತಿ ಭಾಸವಾಗುತ್ತಿದೆ. ಅಗ್ನಿಶಾಮಕ ಠಾಣಾಧಿಕಾರಿ ಕೆ.ರಮೇಶ್ ಇಲ್ಲಿನ ಪುರಸಭೆಯ ಕುಡಿಯುವ ನೀರಿನ ಜಲಶುದ್ಧೀಕರಣ ಘಟಕದ ನಿರುಪಯುಕ್ತ ನೀರು ಬಳಸಿಕೊಂಡು ವಿಸ್ತಾರವಾದ ತೋಟ ನಿರ್ಮಿಸಿದ್ದಾರೆ.
ಉಡುಪಿ ಜಿಲ್ಲೆಯವರಾದ ಇವರು ಕಳೆದ 6 ವರ್ಷದ ಹಿಂದೆ ಭಟ್ಕಳ ಅಗ್ನಿಶಾಮಕ ಠಾಣೆಗೆ ಠಾಣಾಧಿಕಾರಿಯಾಗಿ ನೇಮಕಗೊಂಡರು. ಆ ಸಂದರ್ಭದಲ್ಲಿ ಸುತ್ತಮುತ್ತಲು ನೀರಿನ ಅಭಾವ ಬಹುವಾಗಿ ಕಾಡುತ್ತಿತ್ತು. ಅದರಲ್ಲೂ ಅಗ್ನಿ ಅವಘಡ ತಪ್ಪಿಸಲು ಮುಖ್ಯವಾದ ನೀರಿನ ಪೂರೈಕೆಯೂ ಕಷ್ಟ ಎನ್ನುವ ಪರಿಸ್ಥಿತಿ ಇತ್ತು. ಆದರೆ ಈಗ ಠಾಣೆಯ ಆವರಣ ಗಿಡ-ಮರಗಳಿಂದ ಕೂಡಿದ್ದು ಮನಸ್ಸಿಗೆ ಮುದ ನೀಡುವಂತಿದೆ. ಇದಕ್ಕೆ ಸಿಬ್ಬಂದಿಯೂ ಸಹಕರಿಸಿದ್ದಾರೆ.
ಠಾಣೆಯ ಸುತ್ತಲೂ ಗಿಡಗಳನ್ನು ನೆಡುವುದು ಸರಳವಾದ ಕೆಲಸವಾಗಿರಲಿಲ್ಲ. ಕಡವಿನಕಟ್ಟೆಯ ಕುಡಿಯುವ ನೀರಿನ ಜಲಶುದ್ಧೀಕರಣ ಘಟಕದ ನಿರುಪಯುಕ್ತ ನೀರು ಠಾಣೆಯೆದುರು ಬಂದು ರಸ್ತೆ ಮೇಲೆ ಹರಿಯುತ್ತಿತ್ತು. ಇದನ್ನು ಸಾಕಷ್ಟು ತಿಂಗಳುಗಳ ಕಾಲ ಗಮನಿಸಿದ್ದ ರಮೇಶ್ ಸಂಬಂಧಪಟ್ಟ ಇಲಾಖೆಯ ಜೊತೆಗೆ, ಅಂದಿನ ಪಿಡಬ್ಲ್ಯೂಡಿ ಇಲಾಖೆಯ ಇಂಜಿನಿಯರ್ ವಿನಾಯಕ ಶೇಟ್ ಸಹಕಾರ ಪಡೆದು ನಿರುಪಯುಕ್ತ ನೀರನ್ನು ಶೇಖರಿಸಿಡಲು ತಮ್ಮ ಸ್ವಂತ ಹಣ ವ್ಯಯಿಸಿ ನೀರಿನ ಟ್ಯಾಂಕ್ ನಿರ್ಮಿಸಿದ್ದಾರೆ.
ನಂತರ ಠಾಣೆಯ ಸುತ್ತ ಅಂದಾಜು ಒಂದು ಎಕರೆ ಜಾಗದಲ್ಲಿ ಗಿಡಗಳನ್ನು ನೆಡಲು ಆರಂಭಿಸಿದರು. ಬಹುಮುಖ್ಯವಾಗಿ ಅಗ್ನಿ ಅನಾಹುತಗಳಿಗೆ ಕೊರತೆಯಾಗುತ್ತಿದ್ದ ನೀರನ್ನು ಕೂಡಾ ಇದೇ ನಿರುಪಯುಕ್ತ ನೀರು ಬಳಸಿ ಇನ್ನಷ್ಟು ಉಪಯುಕ್ತವನ್ನಾಗಿಸಿರುವುದು ವಿಶೇಷ.