ಕಾರವಾರ (ಉತ್ತರಕನ್ನಡ):ಗೋವಾ-ಕರ್ನಾಟಕ ಗಡಿಭಾಗದ ಗ್ರಾಮದ ಜನರು ಭಾರಿ ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಳ್ಳಕ್ಕೆ ಹಾಕಿದ್ದ ಸಂಕ ಕೊಚ್ಚಿ ಹೋಗಿದ್ದು ಗ್ರಾಮಸ್ಥರು ಕಳೆದೊಂದು ವಾರದಿಂದ ಪಟ್ಟಣ ಸಂಪರ್ಕಕ್ಕಾಗಿ ಪರದಾಡುತ್ತಿದ್ದಾರೆ. ಗಡಿಯಲ್ಲಿರುವ ಸಿಸೈ ಗ್ರಾಮದಲ್ಲಿ 20 ಕುಟುಂಬಗಳಿದ್ದು ಭಾರಿ ಮಳೆಯಿಂದ ಎರಡು ಬದಿಯಲ್ಲಿ ಹಳ್ಳ ಹರಿಯುವ ಕಾರಣ ಗ್ರಾಮ ದ್ವೀಪದಂತಾಗಿದೆ.
ಒಂದೆಡೆ ಭಾಮಣೆ ಹಳ್ಳ ತುಂಬಿ ಹರಿಯುತ್ತಿದೆ. ಹಳ್ಳಕ್ಕೆ ತಾತ್ಕಾಲಿಕವಾಗಿ ನಿರ್ಮಿಸಿದ ಸೇತುವೆ ಮುಳುಗಿದೆ. ಇನ್ನೊಂದೆಡೆ ತುಂಬಿ ಹರಿಯುತ್ತಿರುವ ಹಳ್ಳಕ್ಕೆ ನಿರ್ಮಿಸಿದ ಕಟ್ಟಿಗೆಯ ಕಾಲುಸಂಕ ಕೊಚ್ಚಿ ಹೋಗಿದ್ದು ಸ್ಥಳೀಯರು ಗ್ರಾಮ ಬಿಟ್ಟು ಹೊರಭಾಗಕ್ಕೆ ತೆರಳಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಸಿಸೈ ಗ್ರಾಮ ಮತ್ತು ದುಧಮಳಾ ಗ್ರಾಮದ ಮಧ್ಯೆ ಹರಿಯುವ ಹಳ್ಳಕ್ಕೆ ಸಣ್ಣ ಪೈಪ್ ಹಾಕಿ ನಿರ್ಮಿಸಿದ ಸೇತುವೆ ಸಂಪೂರ್ಣ ಮುಳುಗಿದೆ. ಸ್ಥಳೀಯರು ಸಂಪರ್ಕಕ್ಕೆ ಕಟ್ಟಿಕೊಂಡ ಕಾಲುಸಂಕ ಇದೀಗ ಎರಡೂ ಬದಿಯಲ್ಲಿ ಮುಳುಗಿದೆ. ಇದರಿಂದ ಹೊರ ಬರಲಾಗದ ಪರಿಸ್ಥಿತಿ ಇದೆ. ನಮ್ಮ ಸಮಸ್ಯೆಯನ್ನು ಯಾರೂ ಕೇಳುವವರಿಲ್ಲ. ಪ್ರತಿ ವರ್ಷವೂ ಇದೇ ರೀತಿ ಪರಿಸ್ಥಿತಿ ಇರುತ್ತದೆ ಎಂದು ಮಹೇಶ ಮಿರಾಶಿ ಆಕ್ರೋಶ ವ್ಯಕ್ತಪಡಿಸಿದರು.
ಡಿಗ್ಗಿ, ಬೊಂಡೇಲಿ, ಸೀಸೈ, ದುಧಮಳಾ ಗ್ರಾಮದಲ್ಲೂ ಭಾರಿ ಮಳೆಯಾಗುತ್ತಿದೆ. ಈ ದಶಕದಲ್ಲೇ ಅತಿ ಹೆಚ್ಚು ಮಳೆ ದಾಖಲಾಗಿದೆ. ಬೊಂಡೇಲಿ ಸಂಪರ್ಕ ಕಳೆದುಕೊಂಡಿದೆ. ಇಲ್ಲಿನ ಜನರು ಸಂಪರ್ಕಕ್ಕೆ ಕನಿಷ್ಟ ಸೇತುವೆ ಮತ್ತು ರಸ್ತೆ ಮಾಡಿಕೊಡಿ ಎಂದು ಅಂಗಲಾಚಿದರೂ ಯಾರೂ ಕೇಳುವವರಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಸಿಸೈ ಗ್ರಾಮ ಸಂಪರ್ಕ ಕಳೆದುಕೊಂಡಿದ್ದರೂ ಈವರೆಗೂ ತಹಶೀಲ್ದಾರ್ ಕಚೇರಿಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿಲ್ಲ. ತಾಲೂಕು ಆಡಳಿತ ನಿರ್ಲಕ್ಷಿಸಿದೆ. ರಾಮನಗರ ಪೊಲೀಸ್ ಸಿಬ್ಬಂದಿಯೋರ್ವರು ಭೇಟಿ ನೀಡಿದ್ದು, ಹಿನ್ನೀರಿನ ಮಟ್ಟ ಇಳಿಯುತ್ತಿದೆ ಎಂದು ತಹಶೀಲ್ದಾರ್‌ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಆದರೆ ಹಿನ್ನೀರಿನ ಮಟ್ಟ ಹಾಗೆಯೇ ಇದ್ದು, ಸಿಸೈ ಗ್ರಾಮ ಇಂದಿಗೂ ನಡುಗಡ್ಡೆಯಾಗಿಯೇ ಉಳಿದಿದೆ ಎಂದು ಗ್ರಾಮದ ಪ್ರಕಾಶ ಮೀರಾಶಿ ಮಾಧ್ಯಮಕ್ಕೆ ಕರೆ ಮೂಲಕ ಮಾಹಿತಿ ನೀಡಿದ್ದಾರೆ.
ರಾಜ್ಯದಗಡಿ ಗ್ರಾಮವೆಂದು ಗುರುತಿಸಿದ ಈ ಎಲ್ಲ ಗ್ರಾಮಗಳ ಕನಿಷ್ಟ ಮೂಲಭೂತ ಸೌಲಭ್ಯವಾದ ರಸ್ತೆ ಮತ್ತು ಸೇತುವೆ ನಿರ್ಮಿಸಲು ಒಂದು ಪ್ಯಾಕೇಜ್ ಘೋಷಣೆ ಮಾಡಬೇಕು. ಸ್ಥಳೀಯರ ಸಮಸ್ಯೆ ದೂರ ಮಾಡಬೇಕೆಂದು ಗ್ರಾಮದ ಮುಖಂಡರಾದ ಪ್ರಕಾಶ ಮಿರಾಶಿ, ದತ್ತಾಮಿ ರಾಶಿ, ರಮೇಶ ಮಿರಾಶಿ, ಸುಭಾಷ ಮಿರಾಶಿ ಮುಂತಾದವರು ಆಗ್ರಹಿಸಿದ್ದಾರೆ. ಈ ಬಗ್ಗೆ ತಹಶೀಲ್ದಾರ್ ಬಸವರಾಜ ಚಿನ್ನಳ್ಳಿ ಅವರನ್ನು ಕೇಳಿದಾಗ ,ಸಿಸೈ ಗ್ರಾಮಕ್ಕೆ ಆವರಿಸಿದ ಹಿನ್ನೀರಿನ ಪ್ರಮಾಣ ಇಳಿಮುಖವಾಗಿದೆ. ಅಧಿಕಾರಿಗಳು ಭೇಟಿ ನೀಡಿದ್ದಾರೆ. ಸದ್ಯ ಸಂಚಾರಕ್ಕೆ ತೊಂದರೆ ಇಲ್ಲ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:Bidar Rain: ಬೀದರ್ನಲ್ಲಿ ಭಾರಿ ಮಳೆ: ಶಾಲಾ-ಕಾಲೇಜುಗಳಿಗೆ ರಜೆ; ಕಾರಂಜಾ ಜಲಾಶಯದಿಂದ ನೀರು ಬಿಡುಗಡೆ