ಕರ್ನಾಟಕ

karnataka

ETV Bharat / state

ತುಂಡು ಭೂಮಿಯಲ್ಲಿ ತರಕಾರಿ ಬೆಳೆ: ಮಳೆ ಕೊರತೆಗೆ ಬಳಲಿದ ಸಾವಯವ ಕೃಷಿ

ಉತ್ತರಕನ್ನಡ ಜಿಲ್ಲೆಯಲ್ಲಿ ಕೆಲವು ರೈತರು ಸಾವಯವ ಕೃಷಿ ನಂಬಿ ಬದುಕು ಸಾಗಿಸುತ್ತಿದ್ದು, ಈ ಬಾರಿ ಮಳೆ ಕೈ ಕೊಟ್ಟಿರುವುದರಿಂದ ಬೆಳೆಗಳು ಸೊರಗುತ್ತಿವೆ.

ಸಾವಯವ ಕೃಷಿ
ಸಾವಯವ ಕೃಷಿ

By ETV Bharat Karnataka Team

Published : Sep 14, 2023, 12:27 PM IST

Updated : Sep 14, 2023, 1:35 PM IST

ಮಳೆ ಕೊರತೆಗೆ ಬಳಲಿದ ಸಾವಯವ ಕೃಷಿ

ಕಾರವಾರ:ಇರುವ ತುಂಡು ಭೂಮಿಯಲ್ಲಿಯೇ ಸಾವಯವ ಕೃಷಿ ಪದ್ಧತಿಯ ಮೂಲಕ ತರಕಾರಿ ಬೆಳೆಯುವ ಕಾರವಾರ ತಾಲೂಕಿನ ಕಡವಾಡ ರೈತರಿಗೆ ಈ ಬಾರಿ ಬಿಸಿಲು-ಮಳೆ ತೊಂದರೆ ಕೊಡುತ್ತಿದೆ. ಬೇಕಾದಾಗ ಮಳೆಯಾಗದೇ ಬಳ್ಳಿಗಳು ಸೊರಗಿ ಇಳುವರಿ ಕಡಿಮೆಯಾಗುವುದರ ಜೊತೆಗೆ ರೋಗಬಾಧೆಯಿಂದಾಗಿ ಬಿಟ್ಟ ಫಸಲು ಕಜ್ಜಿಯಂತಾಗಿ ನಷ್ಟ ಅನುಭವಿಸುವಂತಾಗಿದೆ.

ಮಾರುಕಟ್ಟೆಗಳಿಗೆ ಅದೆಷ್ಟೇ ಕಡಿಮೆ ಬೆಲೆಗೆ ತರಕಾರಿ ಬಂದರೂ ಕೂಡ ಜನ ಸಾವಯವ ಕೃಷಿಯ ತರಕಾರಿಗಳನ್ನೇ ಹುಡುಕಿ ಖರೀದಿಸುತ್ತಾರೆ. ಇದೇ ಕಾರಣಕ್ಕೆ ಪ್ರತಿ ವರ್ಷವೂ ಸಾವಯವ ಪದ್ಧತಿಯಲ್ಲಿತಾಲೂಕಿನ ಕಡವಾಡ ಗ್ರಾಮದಲ್ಲಿ ಸಾವಯವ ತರಕಾರಿಗಳನ್ನು ರೈತರು ಬೆಳೆಯುತ್ತಿದ್ದಾರೆ. ಪ್ರತಿ ವರ್ಷವೂ ಇರುವ ತುಂಡು ಭೂಮಿಯಲ್ಲಿಯೇ ಸಾವಯವ ತರಕಾರಿಗಳನ್ನು ಬೆಳೆದು ಮಾರಾಟ ಮಾಡಿ ಜೀವನ ನಡೆಸುತ್ತಿದ್ದಾರೆ. ಆದರೆ ಈ ಬಾರಿ ಸುರಿದ ಆರಂಭದ ಅಬ್ಬರದ ಮಳೆ ಹಾಗೂ ನಂತರದ ಬಿರು ಬಿಸಿಲು ರೈತರನ್ನು ಹೈರಾಣಾಗಿಸಿದೆ.

ವರ್ಷಂಪ್ರತಿ ಮಳೆ ಸಾಮಾನ್ಯವಾಗಿ ಮೇ ಅಂತ್ಯದ ವೇಳೆ ಆಗುತ್ತಿದ್ದುದರಿಂದ ಅದರಂತೆ ಸೌತೆಕಾಯಿ, ಬೆಂಡೆಕಾಯಿ, ಬದನೆ, ಸೋರೆಕಾಯಿ, ಪಡವಲಕಾಯಿ, ಹಾಗಲಕಾಯಿ, ಹೀರೆಕಾಯಿ ಬೀಜ ಬಿತ್ತನೆ ಮಾಡಿ, ಸಿದ್ಧತೆ ನಡೆಸಿದ್ದರು. ಆದರೆ ಈ ಸಲ ಜೂನ್ ಅಂತ್ಯ ಹಾಗೂ ಜುಲೈ ಮೊದಲ ವಾರದ ವೇಳೆ ಮಳೆ ಸುರಿದಿದೆ. ಇದರಿಂದ ಹಾಕಿದ ಬೀಜ ಕೂಡ ಸರಿಯಾಗಿ ಹುಟ್ಟಿಲ್ಲ. ಬಳಿಕ ಮಳೆ ಕಡಿಮೆಯಾಗುತ್ತಾ ಸಂಪೂರ್ಣ ಮಳೆ ನಿಂತಿದ್ದರಿಂದ ಬಳ್ಳಿ ಹಾಗೂ ಗಿಡಗಳು ಸಮರ್ಪಕವಾಗಿ ಬೆಳವಣಿಗೆ ಕಾಣದಂತಾಗಿದೆ.

ಆದರೆ ಹಬ್ಬಿದ್ದ ಬಳ್ಳಿ ಹಾಗೂ ಬೆಳೆದ ಗಿಡಗಳಲ್ಲಿ ಉತ್ತಮ ಫಸಲು ಬರಬಹುದೆಂದು ಕಾದಿದ್ದ ರೈತರಿಗೆ ನಿರಾಸೆ ತರಿಸಿದೆ. ಬಳ್ಳಿ ಹಬ್ಬುವ ವೇಳೆ ಮಳೆಯಾಗದೆ ಬಿಸಿಲಿಗೆ ಸೊರಗುವಂತಾಗಿದೆ. ಇದರಿಂದ ಬಳ್ಳಿಗಳಲ್ಲಿ ಬಿಟ್ಟ ಕಾಯಿಗಳು ಕಜ್ಜಿ ರೀತಿ ಬೆಳೆದಿದ್ದು ಪ್ರಯೋಜನಕ್ಕೆ ಬಾರದಂತಾಗಿದೆ. ಮಾತ್ರವಲ್ಲ, ಬಳ್ಳಿಗಳು ಹಣ್ಣಾಗಲಾರಂಭಿಸಿರುವುದು ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆ ಮೂಡತೊಡಗಿದೆ.

ಕಡವಾಡ ವ್ಯಾಪ್ತಿಯಲ್ಲಿ ಬೆಳೆದ ತರಕಾರಿ ಕಾರವಾರದ ಸ್ಥಳೀಯ ಮಾರುಕಟ್ಟೆಗೆ ಮಾತ್ರವಲ್ಲದೆ ಪಕ್ಕದ ಗೋವಾ ಮಹಾರಾಷ್ಟ್ರಕ್ಕೂ ಪೂರೈಕೆಯಾಗುತ್ತಿದೆ. ಸಾವಯವ ಗೊಬ್ಬರದಿಂದ ಬೆಳೆದ ಈ ತರಕಾರಿಗಳು ರುಚಿಕಟ್ಟಾಗಿದ್ದು, ಜನ ಕೇಳಿ ಪಡೆಯುತ್ತಾರೆ. ಆದರೆ ಈ ಸಲ ಮಳೆ ಹಾಗೂ ಬಿಸಿಲಿನಿಂದ ಇಳುವರಿ ಕಡಿಮೆಯಾಗಿದೆ. ಇದರಿಂದ ಮಾರುಕಟ್ಟೆಗೆ ಪೂರೈಕೆ ಕೂಡ ಕಡಿಮೆಯಾಗಿದ್ದು ರೈತರು ಹೋಲ್‌ಸೇಲ್ ಮಾರಾಟ ಮಾಡುವ ಕಾರಣ ಅಲ್ಪಲಾಭ ಸಿಗುವಂತಾಗಿದೆ ಎನ್ನುತ್ತಾರೆ ತರಕಾರಿ ಬೆಳೆಗಾರರು.

ಕಡವಾಡ ವ್ಯಾಪ್ತಿಯಲ್ಲಿ ನೂರಕ್ಕೂ ಹೆಚ್ಚು ಕೃಷಿಕರಿದ್ದಾರೆ. ಆದರೆ ಬಹುತೇಕರು ಅಲ್ಪ ಜಮೀನಿನಲ್ಲಿಯೇ ಕೊಟ್ಟಿಗೆ ಗೊಬ್ಬರ, ಸೊಪ್ಪು ಬಳಸಿ ಸೌತೆಕಾಯಿ, ಬೆಂಡೆಕಾಯಿ, ಬದನೆ, ಸೋರೆಕಾಯಿ, ಪಡವಲಕಾಯಿ, ಹಾಗಲಕಾಯಿ, ಹೀರೆಕಾಯಿ ಹೀಗೆ ಹತ್ತಾರು ಬೆಳೆಗಳನ್ನು ಬೆಳೆಯುತ್ತಾರೆ. ಆದರೆ ಮಳೆ ಕೈಕೊಟ್ಟ ಕಾರಣ ಸರಿಯಾಗಿ ಫಸಲು ಕಾಣುತ್ತಿಲ್ಲ. ಕಳೆದ ವರ್ಷಗಳಿಗೆ ಹೋಲಿಸಿದರೆ ಇಳುವರಿ ದೊಡ್ಡ ಪ್ರಮಾದಲ್ಲಿ ಕಡಿಮೆಯಾಗಿದೆ ಎನ್ನುತ್ತಾರೆ ಕಡವಾಡದ ಮಂದ್ರಾಳಿ ರೈತ ಸಂತೋಷ ಗುನಗಿ.

ಹಕ್ಕಿಗಳ ಕಾಟಕ್ಕೆ ಬೇಸತ್ತ ರೈತರು:ಇನ್ನು ಬಿಸಿಲು ಮಳೆಯಿಂದ ಇಳುವರಿ ಸಿಗದೆ ಕಂಗಾಲಾಗಿದ್ದ ರೈತರಿಗೆ ಹಕ್ಕಿಗಳ ಕಾಟದಿಂದಾಗಿ ಗಿಡಗಳಲ್ಲಿ ಬಿಟ್ಟ ಕಾಯಿಗಳನ್ನು ಉಳಿಸಿಕೊಳ್ಳುವುದು ಹರ ಸಾಹಸವಾಗಿದೆ. ಮುಂಜಾನೆಯಿಂದಲೇ ತರಕಾರಿ ಬಳ್ಳಿಗಳಿಗೆ ಮುತ್ತಿಗೆ ಹಾಕುವ ಹಕ್ಕಿಗಳು ಬೆಳೆಯನ್ನು ಅರೆಬರೆ ತಿಂದು ತೆರಳುತ್ತಿವೆ. ಇದರಿಂದ ಆ ತರಕಾರಿ ಬಳಕೆಗೆ ಬಾರದ ಸ್ಥಿತಿ ಇದ್ದು ನಿತ್ಯವೂ ಮುಂಜಾನೆಯಿಂದ ಒಬ್ಬರು ಕಾವಲು ಕಾಯಬೇಕಾದ ಅನಿವಾರ್ಯತೆ ಇದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ:ದೇಶದ ವಾಯುವ್ಯ ಭಾಗ ಹೊರತುಪಡಿಸಿ ಎಲ್ಲೆಡೆ ಮಳೆ ಕೊರತೆ: ಅಕ್ಕಿ, ಧಾನ್ಯಗಳ ಬೆಲೆ ಹೆಚ್ಚಳ

Last Updated : Sep 14, 2023, 1:35 PM IST

ABOUT THE AUTHOR

...view details