ಕಾರವಾರ: ಕೊರೊನಾ ಹಾಗೂ ಒಮಿಕ್ರಾನ್ ಹಿನ್ನೆಲೆ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದ್ದು, ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡಿದೆ. ಹೀಗಾಗಿ ಭಾನುವಾರ ನಡೆಯಬೇಕಾಗಿದ್ದ ಸಂತೆಗೆ ಅವಕಾಶ ಇಲ್ಲದ್ದರಿಂದ ಕರಾವಳಿ ಜಿಲ್ಲೆ ಉತ್ತರ ಕನ್ನಡದಲ್ಲಿ ಮೀನುಗಾರ ಮಹಿಳೆಯರು ಸಂಕಷ್ಟ ಎದುರಿಸುವಂತಾಯಿತು.
ವೀಕೆಂಡ್ ಕರ್ಫ್ಯೂ: ಉತ್ತರ ಕನ್ನಡದಲ್ಲಿ ಒಣ ಮೀನು ವ್ಯಾಪಾರಸ್ಥರ ಪರದಾಟ ಪ್ರತಿ ವಾರ ಭಾನುವಾರದಂದು ನಗರದಲ್ಲಿ ನಡೆಯುವ ಸಂತೆಯ ದಿನ ಮಾತ್ರ ಒಣ ಮೀನು ಮಾರಾಟ ಮಾಡುವ ಮಹಿಳೆಯರು ತಾವು ಒಣಗಿಸಿಟ್ಟ ಮೀನುಗಳನ್ನ ತಂದು ಮಾರಾಟ ಮಾಡುತ್ತಿದ್ದರು. ಇಲ್ಲಿ ವಿವಿಧೆಡೆಯಿಂದ ಜನರು ಮೀನುಗಳ ಖರೀದಿಗೆ ಆಗಮಿಸುತ್ತಿದ್ದರು. ಆದರೆ, ಸಂತೆ ರದ್ದಾದ ಹಿನ್ನೆಲೆ ಸ್ಥಳೀಯ ಮೀನುಗಾರ ಮಹಿಳೆಯರು ವ್ಯಾಪಾರಕ್ಕೆ ಆಗಮಿಸಿರಲಿಲ್ಲ. ಇದರಿಂದ ನಷ್ಟ ಅನುಭವಿಸುವಂತಾಗಿದೆ ಎಂದು ಒಣಮೀನು ಮಾರಾಟಗಾರರು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಭಾನುವಾರದ ಸಂತೆ ರದ್ದಾದ ಹಿನ್ನೆಲೆ ಸ್ಥಳೀಯ ಒಣ ಮೀನು ಮಾರಾಟಗಾರ ಮಹಿಳೆಯರು ವ್ಯಾಪಾರಕ್ಕೆ ಆಗಮಿಸಿರಲಿಲ್ಲ. ಆದರೆ, ಕೆಲ ಹೊರಗಿನ ಮೀನುಗಾರ ಮಹಿಳೆಯರು ಬೆಳಗ್ಗೆಯೇ ಆಗಮಿಸಿ ಒಣಮೀನಿನ ಮಾರಾಟಕ್ಕೆ ಮುಂದಾಗಿದ್ದು, ಇದು ಸ್ಥಳೀಯ ಮೀನುಗಾರ ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ನಗರದಲ್ಲಿ ಕೆಲಹೊತ್ತು ಮೀನುಗಾರ ಮಹಿಳೆಯರ ನಡುವೆ ಮುಸುಕಿನ ಗುದ್ದಾಟ ನಡೆದು, ಬಳಿಕ ಒಣ ಮೀನು ಮಾರಾಟವನ್ನೇ ಸ್ಥಗಿತಗೊಳಿಸಲಾಯಿತು.
ಮೀನು ಮಾರಾಟದಲ್ಲಿ ಬಹುತೇಕ ಮಹಿಳೆಯರೇ ತೊಡಗಿಕೊಳ್ಳುತ್ತಿದ್ದು, ಇದರಲ್ಲಿ ಸಾಕಷ್ಟು ಮಂದಿ ವಯಸ್ಸಾದವರಿದ್ದಾರೆ. ಹೀಗಾಗಿ ಬಿಸಿಲಿನಲ್ಲಿ ಮನೆ ಮನೆಗೆ ತೆರಳಿ ಮಾರಾಟ ಮಾಡುವುದು ಸಾಧ್ಯವಿಲ್ಲ. ಆದ್ದರಿಂದ ಕರ್ಫ್ಯೂ ಅವಧಿಯಲ್ಲಿ ಮೀನು ಮಾರಾಟಕ್ಕೆ ಅವಕಾಶ ನೀಡಬೇಕೆಂದು ಮೀನುಗಾರ ಮಹಿಳೆಯರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಕೋವಿಡ್ ವೀಕೆಂಡ್ ಕರ್ಫ್ಯೂ: ನಗರ ಪೊಲೀಸರಿಂದ 944 ವಾಹನಗಳು ಜಪ್ತಿ