ಕಾರವಾರ (ಉತ್ತರ ಕನ್ನಡ) :ಮದ್ಯದ ಅಮಲಿನಲ್ಲಿ ಸಮುದ್ರಕ್ಕಿಳಿದು ಅಲೆಯಲ್ಲಿ ಕೊಚ್ಚಿ ಹೋಗುತ್ತಿದ್ದವರನ್ನು ರಕ್ಷಣೆ ಮಾಡಿದ ಲೈಫ್ಗಾರ್ಡ್ಗಳ ಮೇಲೆಯೇ ಪ್ರವಾಸಿಗರು ಹಲ್ಲೆ ನಡೆಸಿದ ಘಟನೆ ಭಟ್ಕಳ ತಾಲೂಕಿನ ಮುರುಡೇಶ್ವರ ಕಡಲತೀರದಲ್ಲಿ ನಡೆದಿದೆ. ನೀಲಪ್ಪ ಬಾಲರೆಡ್ಡಿ ಮತ್ತು ಪ್ರಶಾಂತ ಹಳ್ಳಿಗಂಡಿ ರಕ್ಷಣೆಗೊಳಗಾಗಿ ಹಲ್ಲೆ ನಡೆಸಿದ ಪ್ರವಾಸಿಗರು ಎಂದು ತಿಳಿದು ಬಂದಿದೆ. ನೀಲಪ್ಪ ಬಾಲರೆಡ್ಡಿ ಮತ್ತು ಪ್ರಶಾಂತ ಹಳ್ಳಿಗಂಡಿ ಗದಗ ಜಿಲ್ಲೆಯಿಂದ ಮುರುಡೇಶ್ವರಕ್ಕೆ ಪ್ರವಾಸಕ್ಕೆ ಆಗಮಿಸಿದ್ದು ಕಡಲತೀರದಲ್ಲಿ ಅಪಾಯ ಮಟ್ಟದಲ್ಲಿ ಈಜಾಡುತ್ತಿದ್ದರು. ಲೈಫ್‌ಗಾರ್ಡ್ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ, ಲೆಕ್ಕಿಸದೆ ಮದ್ಯದ ಅಮಲಿನಲ್ಲಿದ್ದ ಕಾರಣ ಅಲೆಗೆ ಕೊಚ್ಚಿ ಹೋಗಿದ್ದಾರೆ.
ಇದನ್ನು ಗಮನಿಸಿದ ಲೈಫ್‌ಗಾರ್ಡ್ ತಕ್ಷಣವೇ ತೆರಳಿ ಪ್ರವಾಸಿಗರನ್ನು ರಕ್ಷಿಸಿ ಕರೆತಂದಿದ್ದರು.
ಆದರೆ ಮದ್ಯದ ನಶೆಯಲ್ಲಿದ್ದ ಇಬ್ಬರು ಪ್ರವಾಸಿಗರು ನಾವು ಎಕ್ಸ್‌ಪರ್ಟ್ ಈಜುಪಟುಗಳು. ನಮ್ಮನ್ನು ಯಾಕೆ ಎಳೆದು ತಂದಿದ್ದೀರಿ ಎಂದು ಲೈಫ್ಗಾರ್ಡ್ಗಳೊಮದಿಗೆ ವಾಗ್ವಾದಕ್ಕಿಳಿದಿದ್ದಾರೆ. ಅಷ್ಟೇ ಅಲ್ಲ, ಏಕಾಏಕಿ ಲೈಫ್‌ಗಾರ್ಡ್ ಓರ್ವರ ಮೇಲೆ ಹಲ್ಲೆ ಮಾಡಿದ್ದಾರೆ. ಘಟನೆಯಲ್ಲಿ ಲೈಫ್ಗಾರ್ಡ್ಗೆ ಸಣ್ಣಪುಟ್ಟ ಗಾಯಗಳಾಗಿದೆ. ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೋಕರ್ಣದಲ್ಲಿ ಅಪ್ಪ, ಮಗನ ರಕ್ಷಣೆ:ಗೋಕರ್ಣದ ಮುಖ್ಯ ಕಡಲತೀರದಲ್ಲಿ ಅಲೆಯ ಸುಳಿಗೆ ಸಿಲುಕಿ ಕೊಚ್ಚಿಹೋಗುತಿದ್ದ ಅಪ್ಪ, ಮಗನನ್ನು ಲೈಫ್‌ಗಾರ್ಡ್ ಇತ್ತೀಚೆಗೆ ರಕ್ಷಣೆ ಮಾಡಿದ್ದರು. ಧಾರವಾಡ ಮೂಲದ ಸೋಮಶೇಖರ್ (53), ಕೇಶವ್ (21) ರಕ್ಷಣೆಗೊಳಗಾದವರು. ಕುಟುಂಬದೊಂದಿಗೆ ಒಟ್ಟು ಎಂಟು ಜನರು ಪ್ರವಾಸಕ್ಕೆ ಬಂದಿದ್ದರು. ಇವರು ಆಳ ಸಮುದ್ರಕ್ಕೆ ತೆರಳಿ ಸುಳಿಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದರು. ಲೈಫ್ ಗಾರ್ಡ್ ತೆರಳಿ ಇಬ್ಬರನ್ನು ರಕ್ಷಣೆ ಮಾಡಿದ್ದರು.