ಕಾರವಾರ:ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಕೋಟ್ಯಂತರ ರೂ. ಮೌಲ್ಯದ ಮಾದಕ ವಸ್ತು ಸಹಿತ ನಾಲ್ವರು ಆರೋಪಿಗಳನ್ನು ಅಂಕೋಲಾದ ಬಾಳೆಗುಳಿ ಬಳಿ ಬಂಧಿಸಿದ್ದು, ಜಿಲ್ಲೆಯಲ್ಲಿನ ಈವರೆಗಿನ ಅತಿ ದೊಡ್ಡ ಮಾದಕ ವಸ್ತು ಸಾಗಾಟ ಪತ್ತೆ ಪ್ರಕರಣ ಇದಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ತಿಳಿಸಿದ್ದಾರೆ.
ಕಾರವಾರದಲ್ಲಿ ಈ ಬಗ್ಗೆ ಸುದ್ಧಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಮಂಗಳವಾರ ಸಂಜೆ ಹುಬ್ಬಳ್ಳಿಯಿಂದ ಅಂಕೋಲಾ ಕಡೆಗೆ ಬರುತ್ತಿದ್ದ ಎರಡು ಕಾರಿನಲ್ಲಿ ಮಾದಕ ವಸ್ತು ಸಾಗಾಟದ ಬಗ್ಗೆ ಇಲಾಖೆಗೆ ಖಚಿತ ಮಾಹಿತಿ ಸಿಕ್ಕಿತ್ತು. ಅದರಂತೆ ಜಿಲ್ಲಾ ಅಪರಾಧ ಗುಪ್ತ ವಾರ್ತೆ ಘಟಕದ ಪೊಲೀಸ್ ನಿರೀಕ್ಷಕ ನಿಶ್ಚಲ್ ಕುಮಾರ ಡಿ.ಎಂ. ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಅಪರಾಧ ಪತ್ತೆದಳದ ಪೊಲೀಸರು ಅಂದಾಜು 2 ಕೋಟಿ ರೂ. ಮೌಲ್ಯದ 2 ಕೆ.ಜಿ. 680 ಗ್ರಾಂ. ಬ್ರೌನ್ ಶುಗರ್ ರೀತಿಯ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ ಎಂದು ಹೇಳಿದರು.
ಈ ವೇಳೆ ಅಂಕೋಲಾ ಮೂಲದ ನಾರಾಯಣ (35), ಚಂದ್ರಹಾಸ್ ಗುನಗಾ (29) ಹಾಗೂ ಸಿದ್ದಾಪುರ ಮೂಲದ ವೀರಭದ್ರ ಹೆಗಡೆ (43), ಪ್ರವೀಣ್ ಭಟ್ (30) ಎಂಬುವರನ್ನು ಬಂಧಿಸಲಾಗಿದ್ದು, ಎರಡು ಕಾರು, 4 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.