ಕಾರವಾರ: ಲಾಕ್ಡೌನ್ ಸಡಿಲಿಕೆಯಾದ ಬಳಿಕ ಬೀಚ್, ಮಾರ್ಕೆಟ್ ಸೇರಿದಂತೆ ಕೆಲವೆಡೆ ಜನರು ಅನಾವಶ್ಯಕವಾಗಿ ಸುತ್ತಾಡುತ್ತಿದ್ದು, ಅಂತವರ ವಿರುದ್ಧ ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಎಚ್ಚರಿಕೆ ನೀಡಿದ್ದಾರೆ.
ಕಾರವಾರದಲ್ಲಿ ಅನಗತ್ಯ ಸಂಚಾರ ಮಾಡುವವರ ಮೇಲೆ ಡ್ರೋನ್ ಕಣ್ಗಾವಲು: ಎಸ್ಪಿ ವಾರ್ನಿಂಗ್
4ನೇ ಹಂತದ ಲಾಕ್ಡೌನ್ ಅನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಪಾಲಿಸಿದಿದ್ದರೆ ಡ್ರೋನ್ ಕ್ಯಾಮಾರಾ ಮೂಲಕ ಎಲ್ಲರ ಚಿತ್ರ ಸೆರೆ ಹಿಡಿದು ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಎಸ್ಪಿ ಶಿವಪ್ರಕಾಶ್ ದೇವರಾಜು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 4ನೇ ಹಂತದ ಲಾಕ್ಡೌನ್ ಅನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಈಗ ಪೊಲೀಸರು ಎಲ್ಲರನ್ನು ಕಾಯಲು ಸಾಧ್ಯವಿಲ್ಲ. ಪ್ರತಿಯೊಬ್ಬರು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಸಂಜೆ 6 ಗಂಟೆಯೊಳಗೆ ಕೆಲಸ ಮುಗಿಸಿಕೊಂಡು ಮನೆಗೆ ತೆರಳಬೇಕು ಎಂದರು.
ಕಾರವಾರದಲ್ಲಿ ಕೆಲವರು ಸಂಜೆ ಆಗುತ್ತಿದ್ದಂತೆ ಬೀಚ್ನಲ್ಲಿ ಸುತ್ತಾಡುತ್ತಿದ್ದಾರೆ. ಈಗಾಗಲೇ ಅವರಿಗೆ ಎಚ್ಚರಿಕೆ ನೀಡಲಾಗಿದೆ. ಮುಂದೆ ಹೀಗೆ ಮುಂದುವರಿದಲ್ಲಿ ಡ್ರೋನ್ ಕ್ಯಾಮಾರಾ ಮೂಲಕ ಅವರ ಚಿತ್ರ ಸೆರೆ ಹಿಡಿದು, ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.