ಕಾರವಾರ: ದೇವರು ಕೊಟ್ಟರು ಪೂಜಾರಿ ಕೊಟ್ಟಿಲ್ಲ ಎನ್ನುವ ಗಾದೆ ಮಾತಿನಂತೆ ಇಲ್ಲೊಂದು ಗ್ರಾಮದಲ್ಲಿ ಪಂಚಾಯತಿ ಅನುದಾನದಲ್ಲಿ ನಿರ್ಮಿಸುತ್ತಿದ್ದ ನೀರಿನ ಟ್ಯಾಂಕ್ಗಳನ್ನು ಅರಣ್ಯ ಇಲಾಖೆ ಅಧಿಕಾರಿಯೋರ್ವರು ಧ್ವಂಸಗೊಳಿಸಿದ್ದು, ಇದೀಗ ಸಿಟ್ಟಿಗೆದ್ದ ಗ್ರಾಮಸ್ಥರು ಲೋಕಸಭಾ ಚುನವಣೆಯನ್ನೆ ಬಹಿಷ್ಕರಿಸಲು ಮುಂದಾಗಿದ್ದಾರೆ.
ಹೌದು, ಕಾರವಾರ ತಾಲೂಕಿನ ಮಲ್ಲಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಲಕ್ಷ್ಮಿನಗರದಲ್ಲಿ ಕುಡಿಯುವ ನೀರಿನ ಶೇಖರಣೆಗೆ ಗ್ರಾಮ ಪಂಚಾಯಿತಿ ಅನುದಾನದಲ್ಲಿ ಮೂರು ಟ್ಯಾಂಕ್ಗಳನ್ನು ನಿರ್ಮಿಸಲಾಗುತಿತ್ತು. ಆದರೆ ಇದನ್ನು ಅತಿಕ್ರಮಣ ಜಾಗದಲ್ಲಿ ನಿರ್ಮಿಸಲಾಗುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಮೂರು ಟ್ಯಾಂಕ್ಗಳನ್ನು ಧ್ವಂಸಗೊಳಿಸಿದ್ದಾರೆ. ಇದರಿಂದ ಕುಡಿಯಲು ನೀರೆ ಇಲ್ಲದಂತಾಗಿದೆ. ನಮಗೆ ಮೂಲಭೂತ ಸೌಕರ್ಯವೇ ನೀಡದಿದ್ದಲ್ಲಿ ನಾವೇಕೆ ಮತ ಹಾಕಬೇಕು ಎಂದು ಗ್ರಾಮಸ್ಥರು ಪ್ರಶ್ನಿಸಿದರು.
ಚುನಾವಣೆ ಬಹಿಷ್ಕಾರಕ್ಕೆ ಮುಂದಾದ ಗ್ರಾಮಸ್ಥರು ಇನ್ನು ಈ ಬಗ್ಗೆ ಮಾತನಾಡಿದ ಗ್ರಾಮಸ್ಥೆ ಯಶೋದಾ, ಗ್ರಾಮದಲ್ಲಿ ಸುಮಾರು ಎರಡು ನೂರಕ್ಕೂ ಹೆಚ್ಚು ಮನೆಗಳಿದ್ದು, ಐದು ನೂರಕ್ಕೂ ಹೆಚ್ಚು ಜನಸಂಖ್ಯೆಯಿದೆ. ಸಣ್ಣಪುಟ್ಟ ಮನೆಗಳನ್ನು ಕಟ್ಟಿಕೊಂಡಿರುವ ನಮಗೆ ಕಳೆದ ಹಲವು ವರ್ಷಗಳಿಂದ ನೀರಿನ ಸಮಸ್ಯೆ ತೀವ್ರವಾಗಿದೆ. ಕುಡಿಯುವ ನೀರಿಗಾಗಿ 4 ಕಿ.ಮೀ. ದೂರ ಹೋಗಿ ಆಟೋ ಇಲ್ಲವೇ ವಾಹನಗಳ ಮೇಲೆ ತರಬೇಕಾದ ಸ್ಥಿತಿ ಇದೆ. ಅಲ್ಲದೆ ಬಹುತೇಕರು ಕೂಲಿ ನಾಲಿ ಮಾಡಿ ಜೀವನ ಮಾಡುತ್ತಿರುವುದರಿಂದ ನೀರಿನ ಸಂಗ್ರಹ ಸಾಧ್ಯವಾಗುವುದಿಲ್ಲ.
ಈ ಎಲ್ಲ ಕಾರಣದಿಂದ ಗ್ರಾಮ ಪಂಚಾಯಿತಿಗೆ ಮನವಿ ಮಾಡಿಕೊಂಡು ಮೂರು ಟ್ಯಾಂಕ್ ನಿರ್ಮಾಣಕ್ಕೆ ಅನುಮತಿ ಸಿಕ್ಕಿತ್ತು. ಆದರೆ ಇದೀಗ ಅದನ್ನು ಅರಣ್ಯ ಇಲಾಖೆ ಅಧಿಕಾರಿಯೋರ್ವರು ಧ್ವಂಸಗೊಳಿಸಿ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಗ್ರಾಮದ ಬಹುತೇಕರು ಕಳೆದ ಹಲವು ವರ್ಷಗಳ ಹಿಂದಿನಿಂದಲೇ ಅತಿಕ್ರಮಣ ಮಾಡಿ ಮನೆ ಕಟ್ಟಿಕೊಂಡಿದ್ದು, ಅರಣ್ಯ ಇಲಾಖೆಯಿಂದ ಜಿಪಿಎಸ್ ಕೂಡ ಮಾಡಲಾಗಿದೆ. ಪ್ರಸ್ತುತ ಮೂರು ಟ್ಯಾಂಕ್ಗಳನ್ನು ಜಿಪಿಎಸ್ ಮಾಡಿದ ಸ್ಥಳದಲ್ಲಿಯೇ ನಿರ್ಮಿಸಲಾಗುತ್ತಿತ್ತು. ಆದರೆ ಅರಣ್ಯ ಇಲಾಖೆ ಅಧಿಕಾರಿ ಟ್ಯಾಂಕ್ಗಳ ಕಾಮಗಾರಿ ಒಡೆದು ದರ್ಪ ಮೆರೆದಿದ್ದಾರೆ ಎಂದು ಆರೋಪಿಸಲಾಗಿದೆ.
ಕುಡಿಯುವ ನೀರಿಗೆ ಈ ರಿತಿ ಮಾಡಿರುವುದು ಖಂಡನೀಯ. ನಾವು ಯಾವುದೇ ಮರ ಗಿಡಗಳನ್ನು ಕಡೆದಿಲ್ಲ. ಆದರೂ ಅಧಿಕಾರಿಗಳು ತೊಂದರೆ ನೀಡುತ್ತಿದ್ದಾರೆ. ಕೂಡಲೇ ಕಾಮಗಾರಿಗಳನ್ನು ನಡೆಸಲು ಅವಕಾಶ ನೀಡಬೇಕು. ಇಲ್ಲವಾದಲ್ಲಿ ಮುಂಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಈ ಬಗ್ಗೆ ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ ಬಾಂದೇಕರ್ ಮಾತನಾಡಿ, ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಬಗ್ಗೆ ಗ್ರಾಮ ಪಂಚಾಯತಿಗೆ ಮನವಿ ಮಾಡಿಕೊಂಡಿದ್ದರು. ಅದರಂತೆ ಮೂರು ಟ್ಯಾಂಕ್ ನಿರ್ಮಿಸಲು ಅನುದಾನ ಬಿಡುಗಡೆ ಮಾಡಲಾಗಿತ್ತು. ಅಲ್ಲದೆ ಕಾಮಗಾರಿಯನ್ನು ಈಗಾಗಲೇ ಜಿಪಿಎಸ್ ಮಾಡಿದ ಸ್ಥಳದಲ್ಲಿಯೇ ನಡೆಸಲಾಗುತಿತ್ತು. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಕಾಮಗಾರಿಗೆ ಅಡ್ಡಿಪಡಿಸಿದ್ದಾರೆ. ಒಂದು ಕಡೆ ಜಿಲ್ಲಾಡಳಿತ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ ಎಂದು ಗ್ರಾಮ ಪಂಚಾಯುತಿಗಳಿಗೆ ಒತ್ತಡ ಹಾಕುತ್ತಿದೆ. ಇಲ್ಲಿ ಮಾಡಿದ ಕಾಮಗಾರಿಗಳನ್ನು ಹಾಳು ಮಾಡುತ್ತಿದ್ದಾರೆ. ಇದು ಸರಿಯಲ್ಲ. ಇದರಿಂದ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದು, ಕೂಡಲೇ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.