ಕಾರವಾರ:ಉತ್ತರ ಕನ್ನಡ ಜಿಲ್ಲೆಯನ್ನು ಆಡಳಿತಾತ್ಮಕ ದೃಷ್ಟಿಯಿಂದ ಇಬ್ಭಾಗ ಮಾಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ. ಮಹೇಶ ಜೋಶಿ ಅವರು ಹೇಳಿಕೆ ನೀಡಿದ್ದಾರೆ. ಅಂಕೋಲಾ ಪಟ್ಟಣದ ನಾಡವರ ಸಭಾಭವನದಲ್ಲಿ ಉತ್ತರಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಉತ್ತರ ಕನ್ನಡ ಜಿಲ್ಲೆಯ ಬರಹಗಾರರ ಸಮ್ಮಿಲನ ಅಕ್ಷರೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಡಾ. ಮಹೇಶ್ ಜೊಶಿ ಅವರು, ಉತ್ತರ ಕನ್ನಡ ಜಿಲ್ಲೆ ನಕಾಶೆ ನೋಡಿದಾಗ 12 ತಾಲೂಕುಗಳು ಇಲ್ಲಿವೆ. ಒಟ್ಟು 10,291 ಚ.ಕಿ.ಮೀ. ವಿಸ್ತೀರ್ಣ ಇದೆ. ಭಟ್ಕಳದಿಂದ ಜೊಯಿಡಾಕ್ಕೆ ಹೋಗಲು 220 ಕಿ.ಮೀ. ಕ್ರಮಿಸಬೇಕು. ಮುಂಡಗೋಡದಿಂದ ಕಾರವಾರಕ್ಕೆ, ಸಿದ್ದಾಪುರದಿಂದ ಕಾರವಾರಕ್ಕೆ ಬರಲು 160 ಕಿ.ಮೀ. ಪ್ರಯಾಣಿಸಬೇಕು. ನಾನು ಅವಿಭಜಿತ ಧಾರವಾಡ ಜಿಲ್ಲೆಯವನು. ಅದರಲ್ಲೂ ಹಾವೇರಿ ಜಿಲ್ಲೆಯವನು. ಹೀಗಾಗಿ, ನನಗೆ ಕಷ್ಟಗಳು ಗೊತ್ತಿವೆ. ನನ್ನ ದೊಡ್ಡಣ್ಣ ಹಾವೇರಿಯಿಂದ ಧಾರವಾಡಕ್ಕೆ ಹೋಗಲು ಎಷ್ಟು ಕಷ್ಟಪಡುತ್ತಿದ್ದ ಎನ್ನುವುದನ್ನ ನೋಡಿದ್ದೇನೆ ಎಂದರು.
ಮುಂದುವರಿದು ಮಾತನಾಡಿದ ಅವರು, ನಾನು ರಾಜಕೀಯವಾಗಿ ಮಾತನಾಡುತ್ತಿಲ್ಲ. ಆಡಳಿತಾತ್ಮಕ ವಿಷಯದ ಹಿನ್ನೆಲೆ ಆಡಳಿತಾತ್ಮಕ ಅನುಕೂಲತೆಗಾಗಿ ಬೆಳವಣಿಗೆ- ಪ್ರಗತಿಯ ಗುರಿ ಹಿನ್ನೆಲೆ ಉತ್ತರಕನ್ನಡ ಇನ್ನೊಂದು ಜಿಲ್ಲೆ ಆಗಬೇಕು. ಅದು ಯಾವ ತಾಲೂಕಿನಿಂದಾಗಬೇಕು ಎನ್ನುವುದನ್ನ ಜಿಲ್ಲೆಯವರು ನಿರ್ಧರಿಸಿ ಎಂದರು.