ಭಟ್ಕಳ:ರಂಜಾನ್ ಹಬ್ಬದ ಹಿನ್ನೆಲೆ ಮಸೀದಿಯಲ್ಲಿ ಗುಂಪಾಗಿ ಸೇರಿ ನಮಾಜ್ ಮಾಡಬಾರದು. ಮನೆಯಲ್ಲಿಯೇ ಇದ್ದು ಕುಟುಂಬದವರೊಂದಿಗೆ ಸಂಭ್ರಮದಿಂದ ಹಬ್ಬ ಆಚರಣೆ ಮಾಡಿ ಎಂದು ಸಹಾಯಕ ಆಯುಕ್ತ ಭರತ್ ಎಸ್. ಹೇಳಿದರು.
ಸರ್ಕಾರದ ಸುತ್ತೋಲೆಯಂತೆ ಈ ಬಾರಿ ಎಲ್ಲರೂ ಕಾನೂನು ಪಾಲನೆ ಮಾಡಬೇಕು. ಭಟ್ಕಳದಲ್ಲಿ ಕೊರೊನಾ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಗುಣಮುಖರಾಗುತ್ತಿದ್ದಾರೆ. ಇದಕ್ಕೆ ಕಾರಣ ಅಧಿಕಾರಿಗಳ ಜೊತೆಗೆ ಎಲ್ಲಾ ಸಮುದಾಯಗಳ ಮುಖಂಡರು ನೀಡಿದ ಸಹಕಾರ. ಆದ್ದರಿಂದ ಎಲ್ಲಾ ಸಮುದಾಯದವರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ರಂಜಾನ್ ದಿನ ನಮಾಜ್ ಮಾಡುವಾಗ ಗುಂಪು ಸೇರಬೇಡಿ: ಎಸಿ ಮನವಿ ಭಟ್ಕಳ ಉಪ ವಿಭಾಗದ ಎಎಸ್ಪಿ ನಿಖಿಲ್ ಬಿ. ಮಾತನಾಡಿ, ಭಟ್ಕಳವು ಕೊರೊನಾಗೆ ಕಡಿವಾಣ ಹಾಕಿ ದೇಶಕ್ಕೆ ಮಾದರಿಯಾಗಬೇಕು. ಇಷ್ಟು ದಿನದ ಶ್ರಮವನ್ನು ಮುಂದುವರೆಸಿಕೊಂಡು ಹೋಗಬೇಕು. ನಮ್ಮ ಎಚ್ಚರಿಕೆಯೇ ನಮ್ಮನ್ನು ರಕ್ಷಣೆ ಮಾಡಲಿದೆ. ಸಾಮಾಜಿಕ ಅಂತರ ಕಟ್ಟುನಿಟ್ಟಾಗಿ ಪಾಲಿಸಬೇಕು. ಸರ್ಕಾರದ ಆದೇಶದಂತೆ ಆಜಾನ್ ಕೂಗಲು ಒಬ್ಬರೆ ತೆರಳಬೇಕು. ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂದರು.
ತಂಜೀಂ ಸಂಸ್ಥೆ ಮುಖಂಡ ಇನಾಯತ್ ವುಲ್ಲಾ ಶಾಬಂದ್ರಿ ಮಾತನಾಡಿ, ಹಬ್ಬದ ಸಂಭ್ರಮ ಇಲ್ಲದೇ ಹಬ್ಬ ಮಾಡುತ್ತಿದ್ದೇವೆ. ಸಹಸ್ರಾರು ಸಂಖ್ಯೆಯಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುತ್ತಿದ್ದೆವು. ಆದರೆ ಈ ಬಾರಿ ಅದನ್ನು ನಿಲ್ಲಿಸಿ ಮನೆಯಲ್ಲಿಯೇ ಆಚರಿಸುತ್ತೇವೆ ಎಂದರು.