ಕಾರವಾರ:ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರಕನ್ನಡದಲ್ಲಿ ಕೋವಿಡ್ ನಿಯಂತ್ರಣದಲ್ಲಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿದ್ದು, ಜನರು ಸಹಕಾರ ನೀಡುವಂತೆ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು.
ನಗರದಲ್ಲಿ ನಡೆಸಿ ಮಾತನಾಡಿದ ಅವರು, ಕೋವಿಡ್ ಎರಡನೇ ಅಲೆಯ ಬಗ್ಗೆ ಜಿಲ್ಲಾಡಳಿತ ಅಗತ್ಯ ಮುಂಜಾಗ್ರತೆ ಕ್ರಮ ತೆಗೆದುಕೊಂಡಿದ್ದು, ಈಗಾಗಲೇ ಜಿಲ್ಲೆಯಲ್ಲಿ 2103 ಬೆಡ್‍ಗಳ ವ್ಯವಸ್ಥೆ ಮಾಡಿದೆ. 19 ಮಂದಿ ಆಕ್ಸಿಜನ್ ಚಿಕಿತ್ಸೆಗೆ ಒಳಗಾಗಿದ್ದು, 55 ಮಂದಿ ಸಾಮಾನ್ಯ ಬೆಡ್ ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೇವಲ 74 ಬೆಡ್ ಗಳು ಉಪಯೋಗವಾಗಿದ್ದು, ವೈದ್ಯಕೀಯ ಸೇವೆಯಲ್ಲಿ ಯಾವುದೇ ತೊಂದರೆ ಇಲ್ಲ ಎಂದರು.
ಜಿಲ್ಲೆಯಲ್ಲಿ ಕೋವಿಡ್ ತಡೆಗೆ ಪಿಡಿಓ, ತಹಶೀಲ್ದಾರ್, ಎಸಿ ಒಳಗೊಂಡ 115 ಸೆಕ್ಟರ್ ತಂಡಗಳನ್ನು ಮಾಡಲಾಗಿದೆ. ಕೋವಿಡ್ ಸೋಂಕಿತರಿಗೋಸ್ಕರ ಬಳಸುವ ಆ್ಯಂಬುಲೆನ್ಸ್ ಗಳಿಗೆ ಆಕ್ಸಿಜನ್ ಕಡ್ಡಾಯ ಮಾಡಲಾಗಿದ್ದು, ಒಬ್ಬ ನರ್ಸ್ ಅನ್ನು ಕೂಡ ನಿಯೋಜಿಸಲಾಗಿದೆ. ಇದರಿಂದಾಗಿ ಸಕಾಲಕ್ಕೆ ಜನತೆಗೆ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಬದ್ದವಾಗಿದೆ. ಜನತೆ ಕೋವಿಡ್ ಬಗ್ಗೆ ನಿರ್ಲಕ್ಷ್ಯ ತೋರದೇ ಜಾಗರೂಕರಾಗಿರಬೇಕು. ಲಾಕ್ ಡೌನ್ ಬಗ್ಗೆ ಕೂಡ ಭಯ ಪಡುವ ಅಗತ್ಯ ಇಲ್ಲ ಸರ್ಕಾರ ಜನತೆಯೊಂದಿಗೆ ಇದೆ ಎಂದು ಭರವಸೆ ನೀಡಿದರು.