ಕಾರವಾರ:ಕೊರೊನಾ ಭೀತಿಯಿಂದಾಗಿ ಕರ್ತವ್ಯಕ್ಕೆ ಹಾಜರಾಗದೇ ತರಬೇತಿ ಪಡೆದ ಇಬ್ಬರು ವೈದ್ಯರು ನಾಪತ್ತೆಯಾಗಿರುವ ಘಟನೆ ಕಾರವಾರದಲ್ಲಿ ನಡೆದಿದೆ.
ಉತ್ತರಕನ್ನಡ ಜಿಲ್ಲೆಯಲ್ಲಿ ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತೆ ವಹಿಸಿದ್ದ ಜಿಲ್ಲಾಡಳಿತ ಇಬ್ಬರು ಸರ್ಜನ್, 6 ಎಂಬಿಬಿಎಸ್ ವೈದ್ಯರು, 12 ಮಂದಿ ನರ್ಸ್, 6 ಮಂದಿ ಸಹಾಯಕರಿಗೆ ತರಬೇತಿ ನೀಡಿ ಕೊರೊನಾ ಸೋಂಕಿತರು ದಾಖಲಾಗಿರುವ ನೌಕಾನೆಲೆಯ ಪತಂಜಲಿ ಆಸ್ಪತ್ರೆಗೆ ನಿಯೋಜನೆ ಮಾಡಲಾಗಿತ್ತು.
ಆದರೆ, ಕರ್ತವ್ಯಕ್ಕೆ ಹಾಜರಾಗಬೇಕಿದ್ದ ಕಾರವಾರ ಪ್ರಾಥಮಿಕ ಆರೋಗ್ಯ ಕೇಂದ್ರದ ತರಬೇತಿ ಪಡೆದ ವೈದ್ಯರು ಕೊನೆಯ ಕ್ಷಣದಲ್ಲಿ ಕೆಲಸಕ್ಕೆ ಹಾಜರಾಗದೇ ಕಣ್ಮರೆಯಾಗಿದ್ದಾರೆ. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡ ಪರಿಣಾಮ ಸಂಪರ್ಕಕ್ಕೆ ಕೂಡ ಸಿಗುತ್ತಿಲ್ಲ.
ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿ ಸಿಇಒ ಎಂ.ರೋಶನ್, ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಬೇಕಾಗಿದ್ದ ತರಬೇತಿ ಪಡೆದ ಇಬ್ಬರು ವೈದ್ಯರು ನಾಪತ್ತೆಯಾಗಿದ್ದಾರೆ. ಇದೀಗ ಈ ಇಬ್ಬರಿಗೂ ಕರ್ತವ್ಯಕ್ಕೆ ಹಾಜರಾಗದ ಕುರಿತು ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಅವರು ಒಂದು ವಾರದಲ್ಲಿ ಕಾರಣ ನೀಡಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸದ್ಯ ಮುಂಜಾಗ್ರತಾ ಕ್ರಮವಾಗಿ 125ಕ್ಕೂ ಹೆಚ್ಚು ನುರಿತ ವೈದ್ಯರನ್ನು ಕೊರೊನಾ ಚಿಕಿತ್ಸೆಗೆ ಸಿದ್ದವಾಗಿರಿಸಿಕೊಳ್ಳಲಾಗಿದೆ. ಎಲ್ಲರಿಗೂ ಅವಶ್ಯವಿರುವ ಭದ್ರತೆ ನೀಡಲಾಗುತ್ತದೆ. ಇಂತಹ ತುರ್ತು ಸಂದರ್ಭದಲ್ಲಿ ಖಾಸಗಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ತಾವಾಗಿಯೇ ಸೇವೆಗೆ ಬಂದು ಕೈ ಜೋಡಿಸುವುದು ಬಹುಮುಖ್ಯ ಎಂದು ಹೇಳಿದರು.