ಕಾರವಾರ: ಕದಂಬ ನೌಕಾನೆಲೆ ವ್ಯಾಪ್ತಿಯ ಅಂಜುದೀವ್ ದ್ವೀಪದಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡುವಂತೆ ಗೋವಾ ಕ್ರಿಶ್ಚಿಯನ್ ಸಮುದಾಯದವರು ಒತ್ತಾಯಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಜಿಲ್ಲಾ ಬಿಜೆಪಿ ಘಟಕವು ರಕ್ಷಣಾತ್ಮಕ ದೃಷ್ಟಿಯಿಂದ ಯಾರಿಗೂ ಅವಕಾಶ ನೀಡಬಾರದು. ಒಂದು ವೇಳೆ ಅವಕಾಶ ನೀಡಿದಲ್ಲಿ ಹಿಂದೂಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದೆ.
ನಗರದ ಪತ್ರಿಕಾಭವನದಲ್ಲಿ ಈ ಕುರಿತು ಮಾತನಾಡಿದ ಬಿಜೆಪಿ ಜಿಲ್ಲಾ ವಕ್ತಾರ ನಾಗರಾಜ ನಾಯಕ, ನೌಕಾನೆಲೆಯ ಭದ್ರತೆ ದೃಷ್ಟಿಯಿಂದ ದ್ವೀಪಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಅಲ್ಲಿ ಕ್ರಿಶ್ಚಿಯನ್ ಚರ್ಚ್ಗಳು ಇರುವ ಪೂರ್ವದಲ್ಲಿಯೇ ಹಿಂದೂಗಳ ದೇವಸ್ಥಾನ ಇದ್ದು, ಮೀನುಗಾರರು ಪೂಜೆ ಸಹ ಸಲ್ಲಿಸುತ್ತಿದ್ದರು. ಆದರೆ ಎಷ್ಟೇ ಧಾರ್ಮಿಕ ಭಾವನೆ ಹೊಂದಿದ್ದರೂ ಸಹ ದೇಶ ರಕ್ಷಣೆಯ ಉದ್ದೇಶದಿಂದ ದ್ವೀಪವನ್ನು ಬಿಟ್ಟುಕೊಟ್ಟ ಬಳಿಕ ಎಲ್ಲರೂ ಅದರಿಂದ ದೂರ ಇದ್ದಾರೆ. ಇಂತಹ ಸಂದರ್ಭದಲ್ಲಿ ದ್ವೀಪಕ್ಕೆ ಪ್ರವೇಶ ನೀಡುವಂತೆ ಕ್ರೈಸ್ತ ಸಮುದಾಯದವರು ಒತ್ತಾಯಿಸುತ್ತಿದ್ದು, ಈ ಸಂಬಂಧ ಪೋರ್ಚುಗೀಸ್ ಪ್ರಧಾನಿಗೆ ಪತ್ರ ಬರೆದು ದೇಶದ ಆಡಳಿತ ವ್ಯವಸ್ಥೆಯನ್ನು ಅವಮಾನಿಸಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.