ಭಟ್ಕಳ:ಸುಮಾರು ವರ್ಷಗಳಿಂದ ಸಣ್ಣ ಅಂಗಡಿ ಇಟ್ಟುಕೊಂಡು ಮೀನುಗಳ ಮಾರಾಟದಿಂದ ಬದುಕು ಕಟ್ಟಿಕೊಂಡ ನೂರಾರು ಕುಟುಂಬಗಳು ಈಗ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಗಳ ಆದೇಶದಿಂದ ಕಂಗಾಲಾಗಿವೆ.
ಸ್ಥಳೀಯ ಮೀನುಗಾರರ ಅಸಮಾಧಾನ.. ಮಾವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುರ್ಡೇಶ್ವರ ಮಾತ್ಹೋಬಾರ ಸಮುದ್ರ ತೀರದಲ್ಲಿ ನಿತ್ಯ ಮೀನುಗಳ ಮಾರಾಟದಿಂದ ಜೀವನಕ್ಕೆ ದಾರಿ ಮಾಡಿಕೊಂಡಿದ್ದ ಸ್ಥಳೀಯರ ಅಂಗಡಿ ತೆರವುಗೊಳಿಸಲಾಗಿದೆ. ಹೊರಗಿನವರಿಗೆ ಅಂಗಡಿಗಳನ್ನು ಇಡಲು ಅವಕಾಶ ಕಲ್ಪಿಸಲಾಗಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.ಸ್ಥಳೀಯರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ ಎಂದು ವ್ಯಾಪಾರಿಗಳು ಆರೋಪಿಸುತ್ತಿದ್ದಾರೆ.
ಜಿಲ್ಲಾ ಪಂಚಾಯತ್ ಸಿಇಒ ಈಚೆಗೆ ಎಲ್ಲಾ ಅಂಗಡಿಗಳನ್ನು ತೆರವುಗೊಳಿಸಿದ್ದರು. ಇದರಿಂದ ಸ್ಥಳೀಯರ ಜೀವನೋಪಾಯಕ್ಕೆ ಸಮಸ್ಯೆಯಾಗಿದ್ದರಿಂದ ಮಾನವೀಯತೆ ದೃಷ್ಟಿಯಿಂದ ಸ್ಥಳೀಯರಿಗೆ ಗೂಡಂಗಡಿ ಇಡಲು ಈಚೆಗೆ ನಡೆದ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಆದರೆ, 94 ಗೂಡಂಗಡಿಗಳಲ್ಲಿ ಶೇ.80ರಷ್ಟು ಹೊರಗಿನ ವ್ಯಾಪಾರಿಗಳಿಗೆ ಸ್ಥಳೀಯ ವಿಳಾಸದ ಹೆಸರಲ್ಲಿ ನೀಡಲಾಗುತ್ತಿದೆ ಎಂದು ಮೀನುಗಾರರು ಆರೋಪಿಸಿದ್ದಾರೆ.
ಪಂಚಾಯತ್ ದಾಖಲೆಗಳಿದ್ದರೂ ಸಹ ನನಗೆ ಅಂಗಡಿ ಸಿಗಲಿಲ್ಲ. ನಾವು ಅಂಗಡಿಗಳನ್ನು ಇಡುತ್ತೇವೆ. ಯಾರಾದರೂ ಆಕ್ಷೇಪವೆತ್ತಿದ್ದರೆ ಅದರ ವಿರುದ್ಧ ನಾವೆಲ್ಲ ಬೀದಿಗಿಳಿಯಬೇಕಾಗುತ್ತದೆ ಎಂದು ಮೀನು ವ್ಯಾಪಾರ ನಡೆಸುವ ಮಹಿಳೆ ಮಾದೇವಿ ಕೃಷ್ಣ ಹರಿಕಾಂತ ಎಚ್ಚರಿಕೆ ನೀಡಿದರು.