ಕಾರವಾರ:ಕಳೆದ ಮೂರ್ನಾಲ್ಕು ದಿನಗಳಿಂದ ಅರಬ್ಬಿ ಸಮುದ್ರದಲ್ಲಿ ಹವಾಮಾನ ವೈಪರೀತ್ಯ ಉಂಟಾಗಿ ಆಳಸಮುದ್ರ ಮೀನುಗಾರಿಕೆ ಸ್ಥಗಿತಗೊಂಡಿದೆ.
ವಾಯುಭಾರ ಕುಸಿತದಿಂದಾಗಿ ಸಮುದ್ರದಲ್ಲಿ ಭಾರಿ ಪ್ರಮಾಣದಲ್ಲಿ ಗಾಳಿ ಬೀಸುತ್ತಿದ್ದು ನೂರಾರು ಮೀನುಗಾರಿಕಾ ಬೋಟುಗಳು ಕಾರವಾರ ಬಂದರು ಪ್ರದೇಶದಲ್ಲಿ ಲಂಗರು ಹಾಕಿವೆ. ಈ ಬಾರಿ ಉತ್ತಮ ಮೀನುಗಾರಿಕೆಯ ನಿರೀಕ್ಷೆಯಲ್ಲಿದ್ದ ಮೀನುಗಾರರು ಇದೀಗ ಮತ್ತೆ ಸಂಕಷ್ಟ ಅನುಭವಿಸುವಂತಾಗಿದೆ.
ಮೀನುಗಾರಿಕೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಬೋಟು ಕಾರ್ಮಿಕರು ಕೆಲಸವಿಲ್ಲದೇ ಖಾಲಿ ಕುಳಿತಿದ್ದಾರೆ. ಮತ್ತೊಂದೆಡೆ, ಮೀನುಗಳಿಲ್ಲದೇ ಮೀನು ಸಾಗಾಟ ಲಾರಿಗಳು ಬಂದರಿನಲ್ಲೇ ನಿಂತಿರುವುದು. ಈ ಎಲ್ಲ ದೃಶ್ಯಗಳು ಕಂಡುಬಂದಿದ್ದು ಕಾರವಾರದ ಬಂದರು ಪ್ರದೇಶದಲ್ಲಿ. ಕಳೆದ ಮೂರ್ನಾಲ್ಕು ದಿನಗಳಿಂದ ವಾಯುಭಾರ ಕುಸಿತ ಉಂಟಾದ ಪರಿಣಾಮ, ಅರಬ್ಬಿ ಸಮುದ್ರದಲ್ಲಿ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬೋಟುಗಳು ಸುರಕ್ಷಿತ ಪ್ರದೇಶಗಳಿಗೆ ವಾಪಸ್ಸಾಗಿ ಆಶ್ರಯ ಪಡೆದುಕೊಳ್ಳುವಂತಾಗಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ಅರಬ್ಬಿ ಸಮುದ್ರದಲ್ಲೂ ವಾತಾವರಣ ಪ್ರಕ್ಷುಬ್ಧವಾಗಿದೆ. ಪರಿಣಾಮ ಐದು ದಿನಗಳ ಕಾಲ ಮೀನುಗಾರಿಕೆಗೆ ತೆರಳದಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ರಾಜ್ಯದ ವಿವಿಧೆಡೆಯ ಬೋಟುಗಳು ಸುರಕ್ಷಿತ ಪ್ರದೇಶಗಳಲ್ಲಿ ಆಶ್ರಯ ಪಡೆದುಕೊಂಡಿವೆ.
ಕಾರವಾರ ಬಂದರು ಪ್ರದೇಶದಲ್ಲಿ ಮಂಗಳೂರು, ಮಲ್ಪೆ ಸೇರಿದಂತೆ ವಿವಿಧೆಡೆಯ ಬೋಟುಗಳು ಕಳೆದ ಮೂರು ದಿನಗಳಿಂದ ಲಂಗರು ಹಾಕಿ ನಿಂತಿದ್ದು ಮೀನುಗಾರಿಕೆ ಸ್ಥಗಿತಗೊಂಡಿದೆ. ಇನ್ನೂ ಎರಡು ದಿನಗಳ ಕಾಲ ಸಮುದ್ರದಲ್ಲಿ ಇದೇ ರೀತಿಯ ವಾತಾವರಣ ಮುಂದುವರೆಯುವ ಹಿನ್ನೆಲೆಯಲ್ಲಿ ಯಾವುದೇ ಬೋಟುಗಳು ಮೀನುಗಾರಿಕೆಗೆ ತೆರಳುತ್ತಿಲ್ಲವಾಗಿದ್ದು ಬೋಟಿನ ಕಾರ್ಮಿಕರು ಕೆಲಸವಿಲ್ಲದೇ ಕೂರುವಂತಾಗಿದೆ. ಈ ಬಾರಿ ಉತ್ತಮ ಮೀನುಗಾರಿಕೆ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಹವಾಮಾನ ವೈಪರೀತ್ಯ ಉಂಟಾಗಿದ್ದು ಮೀನುಗಾರರಿಗೆ ಸಂಕಷ್ಟ ಉಂಟುಮಾಡಿದೆ.
ಕಾರವಾರ ಬಂದರು ವ್ಯಾಪ್ತಿಯಲ್ಲಿ ಜಿಲ್ಲೆ ಹಾಗೂ ಹೊರಜಿಲ್ಲೆ ಸೇರಿದಂತೆ ಐನೂರಕ್ಕೂ ಅಧಿಕ ಬೋಟುಗಳು ಆಶ್ರಯ ಪಡೆದುಕೊಂಡಿವೆ. ಮೀನುಗಾರಿಕೆ ಸ್ಥಗಿತಗೊಂಡ ಹಿನ್ನಲೆ ಮೀನುಗಾರಿಕಾ ಕಾರ್ಮಿಕರು ಬೋಟು ಹಾಗೂ ಬಲೆಗಳ ರಿಪೇರಿಯಲ್ಲಿ ತೊಡಗಿದ್ದಾರೆ. ಕಳೆದೆರಡು ದಿನಗಳಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಗೋವಾ ವ್ಯಾಪ್ತಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಮಲ್ಪೆ ಮೂಲದ ಮೂರು ಬೋಟುಗಳಿಗೆ ಹಾನಿಯಾಗಿತ್ತು.
ಈ ವೇಳೆ ಮುಳುಗುವ ಹಂತ ತಲುಪಿದ್ದ ಬೋಟುಗಳಲ್ಲಿದ್ದ ಮೀನುಗಾರರನ್ನ ಕೋಸ್ಟಗಾರ್ಡ್ ಹಾಗೂ ಇತರೆ ಬೋಟುಗಳ ಸಹಾಯದಿಂದ ರಕ್ಷಣೆ ಮಾಡಲಾಗಿತ್ತು. ಹೀಗಾಗಿ ಇನ್ನೆರಡು ದಿನಗಳ ಕಾಲ ಸಮುದ್ರಕ್ಕಿಳಿಯದಂತೆ ಮೀನುಗಾರಿಕಾ ಇಲಾಖೆ ಸಹ ಸೂಚನೆ ನೀಡಿದೆ. ಇನ್ನು ಪ್ರತಿಬಾರಿ ಒಂದಿಲ್ಲೊಂದು ಕಾರಣದಿಂದ ಮೀನುಗಾರಿಕೆಗೆ ಅಡ್ಡಿಯಾಗುತ್ತಿದ್ದು ಇದರಿಂದ ಮೀನುಗಾರರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಮೀನುಗಾರರ ನೆರವಿಗೆ ಬರಬೇಕು ಅನ್ನೋದು ಮೀನುಗಾರ ಮುಖಂಡರ ಆಗ್ರಹ.