ಕರ್ನಾಟಕ

karnataka

ETV Bharat / state

ವಿಧಾನಸಭೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೂಗು: ಜಿಲ್ಲೆಯ ಶಾಸಕರಲ್ಲಿ ಮೂಡದ ಒಮ್ಮತ!

Super Specialty Hospital: ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಬೇಡಿಕೆ ಕುರಿತ ವಿಚಾರವು ಜಿಲ್ಲೆಯ ಜನಪ್ರತಿನಿಧಿಗಳ ನಡುವೆ ಪೈಪೋಟಿಗೂ ಕಾರಣವಾಯಿತು. ನಮ್ಮ ಕ್ಷೇತ್ರದ ವ್ಯಾಪ್ತಿಯಲ್ಲೇ ಸ್ಥಾಪಿಸಬೇಕು ಎಂಬ ಬೇಡಿಕೆಗಳು ಕೇಳಿ ಬಂದವು.

MLAs
ಉತ್ತರ ಕನ್ನಡ ಶಾಸಕರು

By ETV Bharat Karnataka Team

Published : Dec 8, 2023, 7:04 AM IST

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ

ಕಾರವಾರ :ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಂಬಂಧ ಉತ್ತರ ಕನ್ನಡ ಜಿಲ್ಲೆಯ ಶಾಸಕರುಗಳು ಧ್ವನಿ ಎತ್ತಿದ್ದಾರೆ. ಆದರೆ, ಆಸ್ಪತ್ರೆಯನ್ನು ತಮ್ಮದೇ ಕ್ಷೇತ್ರದಲ್ಲಿ ನಿರ್ಮಿಸುವಂತೆ ಬೇಡಿಕೆ ಇಟ್ಟಿದ್ದು, ಶಾಸಕರುಗಳಲ್ಲಿಯೇ ಒಮ್ಮತ ಮೂಡದಿರುವುದು ಕಂಡು ಬಂದಿದೆ.

ಪ್ರಶ್ನೋತ್ತರ ವೇಳೆಯಲ್ಲಿ ಕಾರವಾರ ಶಾಸಕ ಸತೀಶ್ ಸೈಲ್ ಮಾತನಾಡಿ, ಕಳೆದ 8 ವರ್ಷದ ಹಿಂದೆ ಮೆಡಿಕಲ್ ಕಾಲೇಜು ಬಂದರು ಇನ್ನೂ ಕೂಡ ಸೂಕ್ತ ಚಿಕಿತ್ಸೆ ಲಭ್ಯವಾಗುತ್ತಿಲ್ಲ. ಇದೀಗ, ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಂಬಂಧ ಹೋರಾಟ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಸೂಕ್ತ ಆಸ್ಪತ್ರೆ ಇಲ್ಲದ ಕಾರಣ ಸಾವು ನೋವುಗಳು ಹೆಚ್ಚಾಗುತ್ತಿದೆ. ಸದ್ಯಕ್ಕೆ ಕ್ರಿಮ್ಸ್ ಆಸ್ಪತ್ರೆಯಲ್ಲಿ 450 ಬೆಡ್​ಗಳ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಸಚಿವರು ಮುಂದಿನ ದಿನಗಳಲ್ಲಿ ನೋಡೋಣ ಎನ್ನುತ್ತಿದ್ದಾರೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಆಗದಿದ್ದಲ್ಲಿ ಜನರು ಇನ್ನಷ್ಟು ತೊಂದರೆಗೆ ಸಿಲುಕಿಕ್ಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಕಾರವಾರದ ಕ್ರಿಮ್ಸ್ ಆಸ್ಪತ್ರೆಯನ್ನೇ ಅಭಿವೃದ್ಧಿಪಡಿಸಿ ಮುಂದಿನ ದಿನಗಳಲ್ಲಿ ಶಿರಸಿ ಇಲ್ಲವೇ ಕುಮಟಾದಲ್ಲಿ ಬೇರೆ ಆಸ್ಪತ್ರೆಗೆ ಪ್ರಯತ್ನಿಸಬೇಕು ಎಂದು ಆಗ್ರಹಿಸಿದರು.

ಕುಮಟಾ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಬೇಕು. ಈಗಾಗಲೇ ನಾವು ಜಾಗ ಗುರುತಿಸಿದ್ದೇವೆ ಎಂದರು. ಬಳಿಕ ಶಿರಸಿ ಶಾಸಕ ಭೀಮಣ್ಣ ನಾಯ್ಕ ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ ಶಿರಸಿ ವಿಭಾಗ ದೊಡ್ಡದಾಗುತ್ತದೆ. ಶಿರಸಿಯಲ್ಲೇ ಸೂಪರ್ ಸ್ಪೆಷಾಲಿಟಿ ಆಗಬೇಕು ಎಂದು ಒತ್ತಾಯಿಸಿದರು.

ನಂತರ ಮಾತನಾಡಿದ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್, ಉತ್ತರಕನ್ನಡ ಭೌಗೋಳಿಕವಾಗಿ ದೊಡ್ಡ ಜಿಲ್ಲೆ. ಘಟ್ಟದ ಮೇಲೆ ಶಿರಸಿಯಲ್ಲಿ, ಕರಾವಳಿಯಲ್ಲಿ ಕುಮಟಾದಲ್ಲೊಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಬೇಕು ಎಂದರು. ಬಳಿಕ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಪ್ರತಿಕ್ರಿಯೆ ನೀಡಿ, ಇದು ಹಿಂದಿನಿಂದಲೂ ನಡೆಯುತ್ತಿರುವ ಹೋರಾಟ. ಈಗಿರುವ ಕ್ರಿಮ್ಸ್​ನಲ್ಲೇ ಸೂಪರ್ ಸ್ಪೆಷಾಲಿಸ್ಟ್​ಗಳ ನೇಮಕಕ್ಕೆ ಎರಡು ಬಾರಿ ಆಹ್ವಾನಿಸಿದ್ದರೂ ಒಬ್ಬರೇ ಒಬ್ಬ ವೈದ್ಯರು ಅರ್ಜಿ ಸಲ್ಲಿಸಿಲ್ಲ. ಈಗ ಮತ್ತೊಮ್ಮೆ ಕರೆಯುತ್ತೇವೆ. ಮೊದಲು ಕ್ರಿಮ್ಸ್ ಆಸ್ಪತ್ರೆಯನ್ನೇ ಮೇಲ್ದರ್ಜೆಗೇರಿಸಿ ಬಳಿಕ ಮತ್ತೊಂದು ಸೂಪರ್ ಸ್ಪೆಷಾಲಿಟಿ ಕಟ್ಟುವ ಬಗ್ಗೆ ಯೋಚಿಸೋಣ ಎಂದರು.

ಇದನ್ನೂ ಓದಿ :ಕಾರವಾರದ ಜಿಲ್ಲಾಸ್ಪತ್ರೆ ಸೂಪರ್ ಸ್ಪೆಷಾಲಿಟಿಯಾಗಿ ಮೇಲ್ದರ್ಜೆಗೆ : ಸಚಿವ ಶರಣಪ್ರಕಾಶ ಪಾಟೀಲ್

ಸ್ಪೀಕರ್ ಯು ಟಿ ಖಾದರ್ ಕೂಡ ಕಾರವಾರದಿಂದ ಮಂಗಳೂರಿನವರೆಗೆ ಒಂದೇ ಒಂದು ಟ್ರಾಮಾ ಸೆಂಟರ್ ಇಲ್ಲದಿರುವುದು ಬೇಸರದ ಸಂಗತಿ. ಈ ಮೊದಲು ಗಡಿ ಜಿಲ್ಲೆಗಳ ರೋಗಿಗಳಿಗೆ ಗಡಿ ರಾಜ್ಯಗಳ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಭಾರತ್ ನಡೆಯುತ್ತಿತ್ತು. ಇದೀಗ ಗೋವಾದಲ್ಲಿ ಅದು ಯಾಕೆ ಆಗುತ್ತಿಲ್ಲ ಎಂಬ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವರು ಗಮನಹರಿಸುವಂತೆ ಕೋರಿದರು.

ABOUT THE AUTHOR

...view details