ಕಾರವಾರ: ಸಿಹಿ ನೀರಿನಲ್ಲಿ ವಾಸಿಸುವ ಹೊಸ ಪ್ರಭೇದದ ಏಡಿಯೊಂದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಕಂಡುಬಂದಿದೆ. ಈ ಏಡಿಗೆ 'ವೇಲಾ ಬಾಂಧವ್ಯ' ಎಂದು ನಾಮಕರಣ ಮಾಡಲಾಗಿದೆ. ತಾಲೂಕಿನ ಬಾರೆಯಲ್ಲಿರುವ ತೋಟವೊಂದರಲ್ಲಿ ಏಡಿ ಕಾಣಿಸಿಕೊಂಡಿತ್ತು. ನಿಸರ್ಗ ತಜ್ಞ ಗೋಪಾಲಕೃಷ್ಣ ಹೆಗಡೆ, ಅರಣ್ಯ ಇಲಾಖೆಯ ಸಿಬ್ಬಂದಿ ಪರಶುರಾಮ ಭಜಂತ್ರಿ ಮತ್ತು ಪುಣೆಯ ಪ್ರಾಣಿ ಸರ್ವೇಕ್ಷಣಾಲಯದ ಸಮೀರಕುಮಾರ ಪಾಟಿ ತಂಡ ಏಡಿಯನ್ನು ಪತ್ತೆ ಮಾಡಿ, ಸಂಶೋಧನೆ ನಡೆಸಿದೆ.
ವೇಲಾ ಕುಲಕ್ಕೆ ಸೇರಿದ ನಾಲ್ಕನೇ ಪ್ರಭೇದ ಇದಾಗಿದೆ. ಕರ್ಲಿ, ಪುಲ್ವಿನಾಟ, ವಿರೂಪ ಎಂಬ ಮೂರೂ ಪ್ರಭೇದಗಳು ಕೇರಳದ ಕರಾವಳಿ ಭಾಗದಲ್ಲಿ ಈ ಹಿಂದೆ ಕಾಣಸಿಕ್ಕಿವೆ. ಈಗ ಪತ್ತೆಯಾಗಿರುವ ವೇಲಾ ಬಾಂಧವ್ಯ ನಾಲ್ಕನೇ ಪ್ರಭೇದ. ಹಳದಿ ಮತ್ತು ಕೇಸರಿ ಮಿಶ್ರಿತ ಮೈಬಣ್ಣದ ಏಡಿಯು ಮಳೆಗಾಲದಲ್ಲಿ ತೋಟ, ಗದ್ದೆಗಳಲ್ಲಿ ಕಂಡುಬರುತ್ತದೆ. ನಾಲ್ಕಿಂಚು ಅಗಲ, ಮೂರೂವರೆ ಇಂಚು ಉದ್ದವಿರುವ ಈ ಏಡಿಯ ತಲೆಯಿಂದ ಬೆನ್ನಿನ ಮೇಲೆ ಕಪ್ಪು ಬಣ್ಣದ ಪತಂಗದಂಥ ಆಕಾರವಿದೆ. ಸಮತಟ್ಟಾದ ಜಾಗದ ಮಣ್ಣಿನಲ್ಲಿ ಸುಮಾರು ಒಂದರಿಂದ ಒಂದೂವರೆ ಅಡಿಯಷ್ಟು ಆಳದಲ್ಲಿ ರಂಧ್ರ ಕೊರೆದು ಇದು ವಾಸ ಮಾಡುತ್ತದೆ.
ಈ ಏಡಿಯನ್ನು ಕಂಡು ಹಿಡಿದಿರುವ ಗೋಪಾಲಕೃಷ್ಣ ಹೆಗಡೆಯವರ ಮಗಳ ಹೆಸರು ಬಾಂಧವ್ಯ ಹೆಗಡೆ. ಈಕೆ ಬಾರೆಯ ಸರ್ಕಾರಿ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದು, ಅವರ ತೋಟದಲ್ಲಿ ಏಡಿ ಪತ್ತೆಯಾಗಿರುವ ಕಾರಣ ಮಗಳ ಹೆಸರನ್ನೇ ಏಡಿಗೆ ನಾಮಕರಣ ಮಾಡಿದ್ದಾರೆ. ಹೊಸ ಪ್ರಭೇದಗಳು ಪತ್ತೆಯಾದ ಸಂದರ್ಭದಲ್ಲಿ ಅವುಗಳಿಗೆ ಲ್ಯಾಟಿನ್ ಭಾಷೆಯ ಹೆಸರುಗಳನ್ನಿಡುವುದು ಸಾಮಾನ್ಯ. ಆದರೆ ಹೀಗೆ ಇಡುವ ಹೆಸರುಗಳನ್ನು ಸಾಮಾನ್ಯ ಜನತೆ ನೆನಪಿನಲ್ಲಿಡುವುದು ಬಹಳ ಕಷ್ಟ. ಹೀಗಾಗಿ ಎಲ್ಲರಿಗೂ ಅರ್ಥವಾಗುವಂತೆ ಹಾಗೂ ನೆನಪಿನಲ್ಲಿರುವಂತೆ ಈ ಹೆಸರನ್ನು ಆಯ್ಕೆ ಮಾಡಲಾಗಿದೆ.