ಕರ್ನಾಟಕ

karnataka

ETV Bharat / state

ಅಣ್ಣ ಎಳೆಯುವ ನೇಗಿಲು ಹಿಡಿದು ಉಳುವ ತಂಗಿ... ಈ ಜೋಡೆತ್ತುಗಳ ಶ್ರಮ - undefined

ಸಕಲ ಸೌಕರ್ಯಗಳಿದ್ರೂ, ಸಮಸ್ಯೆಗಳನ್ನೇ ಮುಂದಿಟ್ಟು ಮಾತನಾಡುವ ಜನರು ಜಾಸ್ತಿ. ಆದ್ರೆ, ಇಲ್ಲೊಬ್ಬ ದಿವ್ಯಾಂಗ ಯುವಕ ಹೀಗೂ ಮಾಡಿದ್ರೆ ಕೃಷಿಯಲ್ಲಿ ಯಶಸ್ಸು ಗಳಿಸಬಹುದು ಎಂದು ಸಾಧಿಸಿ ತೋರಿಸಿದ್ದಾನೆ. ಆ ಯುವಕನ ಉತ್ಸಾಹದ ಕಥೆಯನ್ನು ಹೇಳ್ತೀವಿ ಕೇಳಿ.

ಕೃಷಿ ಮಾಡಲು ಅಡ್ಡಿಯಾಗಿಲ್ಲ ಅಂಗವೈಕಲ್ಯತೆ...

By

Published : Jun 1, 2019, 11:36 PM IST

Updated : Jun 2, 2019, 12:00 AM IST

ಕಾರವಾರ: ಆತ ಹುಟ್ಟಿನಿಂದ ದಿವ್ಯಾಂಗ ವ್ಯಕ್ತಿ. ಆದರೂ ಕೂಡ ಕೈಕಟ್ಟಿ ಕುಳಿತವನಲ್ಲ. ಕುಟುಂಬ ನಿರ್ವಹಣೆಗಾಗಿ ಕೃಷಿಯಲ್ಲಿ ತೊಡಗಿಕೊಂಡಿರುವ ಈತ ನೇಗಿಲಿಗೆ ತಾನೇ ಹೇಗಲು ಕೊಡುತ್ತಿದ್ದು, ತನ್ನ ಸಹೋದರಿ‌ ನೇಗಿಲು ಹಿಡಿದು ಉಳುವ ಮೂಲಕ ಸ್ವಾವಲಂಬಿ ಜೀವನಕ್ಕಾಗಿ ಬೆವರು ಹರಿಸುತ್ತಿದ್ದಾರೆ.

ಕಾರವಾರದ ಗುನಗಿವಾಡದ ಗಿರಿಧರ್ ಗುನಗಿ ಹಾಗೂ ಆತನ ಸಹೋದರಿ ಸುಜತಾ ಬದುಕಿನ ಬಂಡಿ ನಡೆಸಲು ಕಳೆದ 8 ವರ್ಷಗಳಿಂದ ಜೋಡೆತ್ತುಗಳಾಗಿ ದುಡಿಯುತ್ತಿದ್ದಾರೆ. ಗಿರಿಧರ್ ಅವರಿಗೆ ಹುಟ್ಟಿನಿಂದಲೂ ಅಂಗವೈಕಲ್ಯತೆ ಅಂಟಿಕೊಂಡಿದೆ.‌ ಆದರೆ ಇವರ ಛಲಬಲಕ್ಕೆ ಈ ವೈಕಲ್ಯತೆ ಎಂದೂ ಅಡ್ಡಿಯಾಗಿಲ್ಲ. ಕುಟುಂಬದಿಂದ ಬೇರ್ಪಟ್ಟ ಬಳಿಕ ತಾಯಿ-ತಂಗಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಹೊತ್ತಿದ್ದ ಗಿರಿಧರ್, ತನ್ನ ಪಾಲಿಗೆ ಬಂದ 20 ಗುಂಟೆ ಜಮೀನಿನಲ್ಲಿಯೇ ಕೃಷಿ ಮಾಡ್ತಿದ್ದಾರೆ. ಆದರೆ ತೀರಾ ಬಡತನ ಹಾಗೂ ಎತ್ತುಗಳನ್ನು ಸಾಕಲಾಗದ ಪರಿಸ್ಥಿತಿಯಿಂದ ತಾನೇ ಎತ್ತಾಗಿ ತಂಗಿಗೆ ನೇಗಿಲು ಹಿಡಿಯಲು ಹೇಳಿ ಉಳುಮೆ ಮಾಡುತ್ತಿರುವ ದೃಶ್ಯ ಕರುಳು ಕರಗಿಸುತ್ತಿದೆ.

ಮಳೆಗಾಲದಲ್ಲಿ ಭತ್ತ ಬೆಳೆದರೆ, ಬೇಸಿಗೆಯಲ್ಲಿ ಕ್ಯಾರೆಟ್, ಬದನೆಕಾಯಿ, ಹರವೆ, ಬೆಂಡೆಕಾಯಿ, ಟೊಮೆಟೊ ಸೇರಿದಂತೆ ಹತ್ತಾರು ಬೆಳೆಗಳನ್ನು ಬೆಳೆಯುತ್ತಾರೆ. ಆದರೆ ಮಳೆಗಾಲದಲ್ಲಿ ಭತ್ತ ನಾಟಿ ಬಳಿಕ ಏನೂ ಕೆಲಸ ಇಲ್ಲದಿದ್ದಾಗ ಖಾಲಿ ಕುಳಿತುಕೊಳ್ಳುವ ಬದಲು ಸಮುದ್ರದಲ್ಲಿ ಮೀನು ಹಿಡಿದು ಮಾರುತ್ತಾರೆ. ಆದರಿಂದ ಬರೋ ಹಣದಿಂದ ಕುಟುಂಬದ ನಿರ್ವಹಣೆ ಮಾಡ್ತಾರಂತೆ.

ಕೃಷಿ ಮಾಡಲು ಅಡ್ಡಿಯಾಗಿಲ್ಲ ಅಂಗವೈಕಲ್ಯತೆ...

ಇನ್ನು ಈತನಿಗೆ ಹೆಗಲಾಗಿ ತಾಯಿ ಲೋಲಿ ಹಾಗೂ ತಂಗಿ ಸುಜಾತಾ ನಿಂತಿದ್ದಾರೆ. ಮಗ ಬೆಳೆಯುವ ತರಕಾರಿಗಳನ್ನು ತಾಯಿ ನಗರಕ್ಕೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಾರೆ. ನಿತ್ಯ ಬೆಳಿಗ್ಗೆ ರಸ್ತೆ ಮೇಲೆ ಬಿದ್ದ ಸಗಣಿಯನ್ನು ತಂದು ಗೊಬ್ಬರ ಮಾಡುವ ಇವರು ತರಕಾರಿ ಹಾಗೂ ಭತ್ತವನ್ನು ಸಾವಯವ ಪದ್ದತಿಯಿಂದಲೇ ತಯಾರಿಸುತ್ತಾರೆ. ಇದರಿಂದ ಇಲ್ಲಿ ಬೆಳೆಯುವ ತರಕಾರಿಗಳಿಗೆ ಬೇಡಿಕೆ ಕೂಡ ಹೆಚ್ಚಿದೆ.

ಸರ್ಕಾರದಿಂದ ಸಬ್ಸಿಡಿಯಲ್ಲಿ ಯಂತ್ರಗಳನ್ನು ತೆಗೆದುಕೊಳ್ಳಿ ಅಂತಾರೆ, ಆದರೆ ನನ್ನ ಬಳಿ ಅಷ್ಟು ಹಣವಿಲ್ಲ. ಸರ್ಕಾರ ಸಹಾಯ ಹಸ್ತ ಚಾಚಿದ್ರೆ ಅನುಕೂಲ ಎನ್ನುವ ಗಿರೀಧರ್‌ಗೆ ಒಂದು ಕಾಲು ಚಿಕ್ಕದಾಗಿದೆ. ಅಲ್ಲದೆ ಬೆರಳುಗಳು ಸರಿಯಾಗಿಲ್ಲ. ಇದರಿಂದ ಒಡಾಡುವುದಕ್ಕೂ ಕಷ್ಟಪಡಬೇಕಾದ ಸ್ಥಿತಿ. ಉಳುಮೆ ಮಾಡಿದ ಸಂದರ್ಭದಲ್ಲಿ ನೋವು ನಿವಾರಣೆಗಾಗಿ ಮಾತ್ರೆಗಳನ್ನ ತಗೊಳ್ತಾರಂತೆ. ಇಂತಹ ಕಠಿಣ ಪರಿಸ್ಥಿತಿಯಲ್ಲೂ ಛಲ ಬಿಡದೇ ಕೃಷಿ ಮಾಡಿ ಮಾದರಿ ಕೃಷಿಕನಾಗಿದ್ದಾರೆ.

ಇನ್ನು ಮಗನ ಕೆಲಸದ ಬಗ್ಗೆ ಹೆಮ್ಮೆ ಪಡುವ ತಾಯಿ ಲೋಲಿ, ಮಗ, ಮಗಳು ಇಬ್ಬರು ತುಂಬಾ ಕಷ್ಟ ಪಡುತ್ತಾರೆ. ಇದರಿಂದ ನಮ್ಮ ಜೀವನವನ್ನು ನಡೆಸಲು ಸಾಧ್ಯವಾಗುತ್ತಿದೆ. ಇರೋ ಅಲ್ಪ ಸ್ವಲ್ಪ ಭೂಮಿಯಲ್ಲಿಯೇ ಸಾಧ್ಯವಾದಷ್ಟು ಬೆಳೆ ಬೆಳೆದು ಮಾರಾಟ ಮಾಡುತ್ತಿದ್ದು, ಜೀವನ ಸಾಗಿಸುತ್ತಿದ್ದೇವೆ ಅಂತಾರೆ.

ಸಕಲ ಸೌಕರ್ಯಗಳಿದ್ರೂ, ಸಮಸ್ಯೆಗಳನ್ನೇ ಮುಂದಿಟ್ಟು ಮಾತನಾಡುವ ಮಂದಿಯ ನಡುವೆ, ಅಂಗವೈಕಲ್ಯತೆಯನ್ನು ಮೆಟ್ಟಿನಿಂತು ದುಡಿದು ಬದುಕುವ ಗಿರಿಧರ್‌ ಛಲಬಲಕ್ಕೆ ಸಾಟಿಯೇನು ಹೇಳಿ?

Last Updated : Jun 2, 2019, 12:00 AM IST

For All Latest Updates

TAGGED:

ABOUT THE AUTHOR

...view details