ಹೊನ್ನಾವರ: ತಾಲೂಕಿನ ವಿವಿಧೆಡೆ ಗೇರು ಬೆಳೆಯ ಅಭಿವೃದ್ಧಿಗಾಗಿ ಗುಡ್ಡದಲ್ಲಿರುವ ಉಳಿದೆಲ್ಲಾ ಜಾತಿಯ ಗಿಡಗಂಟಿ ಹಾಗೂ ದೊಡ್ಡ ಮರಗಳನ್ನು ಬೇರು ಸಮೇತ ಕಿತ್ತು ಹಾಕಲಾಗಿದೆ. ಕೆಸಿಡಿಸಿಯ ನಿರ್ದಾಕ್ಷಿಣ್ಯ ನಿಲುವಿಗೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೇರು ಅಭಿವೃದ್ಧಿಗೆ ಗಿಡ-ಮರಗಳ ನಾಶ: ಕೆಸಿಡಿಸಿ ವಿರುದ್ಧ ರೈತರ ಆಕ್ರೋಶ
ಗೇರು ಬೆಳೆಯ ಅಭಿವೃದ್ಧಿಗಾಗಿ ಹೊನ್ನಾವರ ತಾಲೂಕಿನ ಖರ್ವಾ ಹಾಗೂ ಜಲವಳ್ಳಿ ಪಂಚಾಯತಿ ವ್ಯಾಪ್ತಿಯ ದಿಬ್ಬಣಗಲ್ ಸುತ್ತಮುತ್ತಲಿನ ಪ್ರದೇಶದಲ್ಲಿ ಗಿಡಗಂಟಿ ಹಾಗೂ ದೊಡ್ಡ-ದೊಡ್ಡ ಮರಗಳನ್ನು ಬೇರು ಸಮೇತ ಕಿತ್ತು ಹಾಕಲಾಗಿದೆ.
ತಾಲೂಕಿನ ಖರ್ವಾ ಹಾಗೂ ಜಲವಳ್ಳಿ ಪಂಚಾಯತಿ ವ್ಯಾಪ್ತಿಯ ದಿಬ್ಬಣಗಲ್ ಸುತ್ತಮುತ್ತ ಅರಣ್ಯ ಇಲಾಖೆಗೆ ಸೇರಿದ ಪ್ರದೇಶದಲ್ಲಿ ಕರ್ನಾಟಕ ಗೇರು ಅಭಿವೃದ್ಧಿ ನಿಗಮದವರು ಲೀಸ್‍ಗೆ ಪಡೆದು ಗೇರು ಗಿಡ ನೆಟ್ಟು ನಿರ್ವಹಿಸುತ್ತಿದ್ದಾರೆ. ಮಳೆಗಾಲ ಆರಂಭವಾಗುವ ಪೂರ್ವದಲ್ಲಿ ಗೇರು ಮರಗಳ ಬುಡಕ್ಕೆ ಮಣ್ಣು ಹಾಕುವ ಕಾರ್ಯಕ್ಕೆ ಕೆಸಿಡಿಸಿ ಮುಂದಾಗಿದೆ. ಅಲ್ಲದೇ ಗೇರು ಮರಗಳ ಅಭಿವೃದ್ಧಿಗೆ ಮುಂದಾದ ಇಲಾಖೆ ಅದಕ್ಕಾಗಿ ಗುಡ್ಡದಲ್ಲಿನ ಇತರೇ ಜಾತಿಯ ಎಲ್ಲಾ ಮರ ಗಿಡಗಳನ್ನು ಜೆಸಿಬಿ ಯಂತ್ರ ಬಳಸಿ ಬೇರು ಸಮೇತ ಕಿತ್ತು ಹಾಕಿದೆ. ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಮಟ್ಟದಲ್ಲಿ ಆದಾಯ ತರುತ್ತಿರುವ ಕೆಸಿಡಿಸಿ ಗೇರು ಮರಗಳ ಹೊರತಾಗಿ, ಉಳಿದ ಸಸ್ಯ ಸಂಪತ್ತಿನ ಬಗ್ಗೆ ಹೊಂದಿರುವ ನಿರ್ಧಾಕ್ಷಿಣ್ಯ ನಿಲುವು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಸೊಪ್ಪು ಮತ್ತು ತರಗೆಲೆಗಳಿಗಾಗಿ ಸಮೀಪದ ಗುಡ್ಡವನ್ನೇ ಆಶ್ರಯಿಸಿರುವ ಹಳ್ಳಿಯ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಕೇವಲ ಇಲಾಖೆಗೆ ಆದಾಯ ತರಬಲ್ಲ ಮರಗಳತ್ತ ಮಾತ್ರ ಗಮನ ಕೇಂದ್ರೀಕರಿಸಿದರೆ ಪರಿಸರ ವೈವಿಧ್ಯತೆ ಕಾಪಾಡಿಕೊಳ್ಳುವುದು ಹೇಗೆ ಸಾಧ್ಯವಾಗುತ್ತದೆ. ಹಿಂಡು ಪೊದೆಗಳನ್ನು ಆಶ್ರಯಿಸಿದ್ದ ಪ್ರಾಣಿ ಪಕ್ಷಿಗಳು ಎಲ್ಲಿಗೆ ಹೋಗಬೇಕು. ಅವುಗಳ ಆಹಾರ ಆಶ್ರಯ ಎಲ್ಲವನ್ನೂ ನಿರ್ನಾಮ ಮಾಡಿದ್ದು ಎಷ್ಟರಮಟ್ಟಿಗೆ ಸರಿ ಎಂಬುದು ರೈತರ ಪ್ರಶ್ನೆಯಾಗಿದೆ.