ಕಾರವಾರ: ಅಂತಾರಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಣೆ ವಿರೋಧಿ ದಿನದ ನಿಮಿತ್ತ ಅಂಕೋಲಾ ತಾಲೂಕಿನ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಕೆನರಾ ಜೀವವೈವಿಧ್ಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಮಾದಕ ವಸ್ತುಗಳನ್ನು ನಿನ್ನೆ ನಾಶಪಡಿಸಲಾಗಿದೆ.
ಕಾರವಾರದಲ್ಲಿ 24.8 ಲಕ್ಷ ರೂ. ಮೌಲ್ಯದ ಮಾದಕ ವಸ್ತು ನಾಶ - ಉತ್ತರ ಕನ್ನಡ ಜಿಲ್ಲೆ
ನಿನ್ನೆ ಅಂತಾರಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಣೆ ವಿರೋಧಿ ದಿನ. ಹೀಗಾಗಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ ವಶಪಡಿಸಿಕೊಂಡು ಕೋರ್ಟ್‌ನಿಂದ ಇತ್ಯರ್ಥವಾಗಿದ್ದ ಪ್ರಕರಣಗಳ ಮಾಲುಗಳನ್ನು ನಾಶಪಡಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಸಾದ ದೇವರಾಜು ನೇತ್ರತ್ವದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಪೊಲೀಸರು ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಗಾಂಜಾ, ಚರಸ್ ಮುಂತಾದ ಮಾದಕ ವಸ್ತುಗಳನ್ನು ಕೋರ್ಟ್ ಇತ್ಯರ್ಥಪಡಿಸಿದ ಪ್ರಕರಣಗಳ ಮಾಲುಗಳನ್ನು ವಿಲೇವಾರಿ ಸಮಿತಿಯ ನಿರ್ದೇಶನದಂತೆ ನಾಶಪಡಿಸಲಾಗಿದೆ. ಈ ಪ್ರಕ್ರಿಯೆ ರಾಜ್ಯದಾದ್ಯಂತ ನಡೆಯುತ್ತಿದ್ದು, ಮಾದಕ ವಸ್ತು ಸೇವನೆ ಮತ್ತು ಕಳ್ಳಸಾಗಣೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಇದೇ ವೇಳೆ ಎಸ್ಪಿ ತಿಳಿಸಿದ್ದಾರೆ.
ಜಿಲ್ಲೆಯಾದ್ಯಂತ ವಶಪಡಿಸಿಕೊಂಡ 69 ಪ್ರಕರಣಗಳ 88.9 ಕಿ.ಗ್ರಾಂ.ನಷ್ಟು ಗಾಂಜಾ, 3 ಪ್ರಕರಣಗಳಲ್ಲಿ 504 ಗ್ರಾಂ.ನಷ್ಟು ಚರಸ್, 7 ಪ್ರಕರಣಗಳಲ್ಲಿ 431 ಗಾಂಜಾ ಸಸ್ಯಗಳನ್ನು ತ್ಯಾಜ್ಯ ವಿಲೇವಾರಿ ಘಟಕದ ಬಾಯ್ಲರ್‌ನಲ್ಲಿ ಸುಡಲಾಯಿತು. ನಾಶಪಡಿಸಿದ ವಸ್ತುಗಳ ಒಟ್ಟು ಮೌಲ್ಯ 24.8 ಲಕ್ಷ ರೂಪಾಯಿನಷ್ಟಿದ್ದು, 2018ರಲ್ಲಿ ಒಮ್ಮೆ ಇದೇ ರೀತಿ ನಾಶಪಡಿಸಲಾಗಿತ್ತು.
ಪಿಎಸ್ಐ ಪ್ರವೀಣಕುಮಾರ್, ಪ್ರೆಮನಗೌಡ ಪಾಟೀಲ, ಪ್ರೊಬೆಷನರಿ ಪಿಎಸ್‌ಐ ಮಲ್ಲಿಕಾರ್ಜುನಯ್ಯ, ಕಂದಾಯ ನಿರಿಕ್ಷಕ ರಾಘವೇಂದ್ರ ಜನ್ನು, ಗ್ರಾಮ ಲೆಕ್ಕಿಗ ಭಾರ್ಗವ ನಾಯಕ, ವಿಲೇವಾರಿ ಘಟಕದ ವ್ಯವಸ್ಥಾಪಕ ಪ್ರವೀಣ ಕಾಂಬಳೆ, ಸೂಪರ್‌ವೈಸರ್ ಪ್ರಸನ್ನ ನಾಯ್ಕ ಉಪಸ್ಥಿತರಿದ್ದರು.