ಕಾರವಾರ (ಉ.ಕ): ಕುಮಟಾ ತಾಲೂಕಿನ ನಾಗೂರು ವ್ಯಾಪ್ತಿಯಲ್ಲಿ 50ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಗಿಡ ಮರಗಳನ್ನು ಕಡಿದು ಕಂದಾಯ ಭೂಮಿ ಅತಿಕ್ರಮಣಕ್ಕೆ ಮುಂದಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಟಾ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿರುವುದಾಗಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
ಕುಮಟಾದ ಮಿರ್ಜಾನ್ ಪಂಚಾಯಿತಿಯ ನಾಗೂರು ಹಾಗೂ ಖಂಡಗಾರ ವ್ಯಾಪ್ತಿಯಲ್ಲಿರುವ ಕಂದಾಯ ಭೂಮಿ ಮೇಲೆ ಭೂಗಳ್ಳರು ಕಣ್ಣಿಟ್ಟಿರುವ ಶಂಕೆ ವ್ಯಕ್ತವಾಗಿತ್ತು. ಮಾತ್ರವಲ್ಲದೆ, ಸುಮಾರು 50 ಎಕರೆ ಪ್ರದೇಶದಲ್ಲಿ ಗಿಡ ಮರಗಳನ್ನು ಕಡಿದು ಕಬಳಿಕೆಗೂ ಮುಂದಾಗಿದ್ದರ ಬಗ್ಗೆ ‘ಈಟಿವಿ ಭಾರತ‘ದಲ್ಲಿ ‘ಕಂದಾಯ ಭೂಮಿ ಮೇಲೆ ಭೂಗಳ್ಳರ ಕಣ್ಣು; ಕಣ್ಮುಚ್ಚಿ ಕುಳಿತ ಅರಣ್ಯ ಇಲಾಖೆ’ ಎಂಬ ತಲೆಬರಹದಡಿ ವಿಸ್ತ್ರತ ವರದಿ ಪ್ರಕಟವಾಗಿತ್ತು.