ಕಾರವಾರ: ಕೊರೊನಾ ವೈರಸ್ನಿಂದಾಗಿ ಎಲ್ಲಾ ಕ್ಷೇತ್ರದ ಉದ್ದಿಮೆಗಳಿಗೆ ಭಾರೀ ಹೊಡೆತ ಬಿದ್ದಿದೆ. ಅದರಲ್ಲೂ ಪ್ರವಾಸೋದ್ಯಮದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಹಾಗೆಯೇ ಉತ್ತರಕನ್ನಡ ಜಿಲ್ಲೆಗೆ ಪ್ರವಾಸೋದ್ಯಮದಲ್ಲಿ ದೊಡ್ಡ ನಷ್ಟವೇ ಆಗಿದೆ. ಇನ್ನೇನು ಎರಡೇ ದಿನದಲ್ಲಿ ಬ್ಲೂ ಫ್ಲ್ಯಾಗ್ ಮಾನ್ಯತೆ ಪಡೆಯಲು ಲೋಕಾರ್ಪಣೆ ಆಗಬೇಕಿದ್ದ ಸಮಯದಲ್ಲೇ ಲಾಕ್ಡೌನ್ ಆಗಿದ್ದರಿಂದ ಇಕೋ ಬೀಚ್ ಲಾಕ್ ಆಯಿತು. ಇದೀಗ ಪ್ರಕೃತಿಯ ವಿಕೋಪಕ್ಕೆ ಸಿಕ್ಕಿ ಕಡಲಕೊರೆತದ ಸಮಸ್ಯೆ ಎದುರಿಸುತ್ತಿದೆ.
ಕಡಲ ಕೊರೆತಕ್ಕೆ ಸಿಲುಕಿ ನಲುಗುತ್ತಿವೆ ಇಕೋ ಬೀಚ್ನ ಕಾಮಗಾರಿಗಳು ಇನ್ನೇನು ಕೆಲವೇ ದಿನದಲ್ಲಿ ಬ್ಲೂ ಫ್ಲ್ಯಾಗ್ ಸರ್ಟಿಫಿಕೇಟ್ ದೊರೆತು ಅಂತಾರಾಷ್ಟ್ರೀಯ ಗುಣಮಟ್ಟವನ್ನು ಹೊಂದಿದ ಕಡಲತೀರ ಎನ್ನುವ ಹೆಗ್ಗಳಿಕೆ ತನ್ನದಾಗಿಸಿಕೊಳ್ಳಲಿದ್ದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡ ಇಕೋ ಬೀಚ್ ಈಗ ಪ್ರಕೃತಿಯ ಮುನಿಸಿಗೆ ಮೈ ಒಡ್ಡಿದೆ. ಕಡಲತೀರದಲ್ಲಿ ನಿರ್ಮಿಸಲಾದ ಪ್ರವಾಸಿಗರ ಆಕರ್ಷಿತ ಕಾಮಗಾರಿಗಳು ಕಡಲಕೊರೆತಕ್ಕೆ ಸಿಕ್ಕಿ ಅಸ್ತವ್ಯಸ್ತವಾಗಿವೆ.
ಕಳೆದ ಮಾರ್ಚ್ ತಿಂಗಳಲ್ಲೆ ಈ ಕಡಲತೀರ ಲೋಕಾರ್ಪಣೆ ಆಗಬೇಕಿತ್ತು. ಆದರೆ, ಲಾಕ್ಡೌನ್ನಿಂದಾಗಿ ಉದ್ಘಾಟನೆ ಕಾರ್ಯಕ್ರಮವನ್ನ ಮುಂದಕ್ಕೆ ಹಾಕಲಾಯಿತು. ಆದರೆ, ಉದ್ಘಾಟನೆ ಮುಂಚಿತವಾಗಿಯೇ ನಿರ್ಮಿತವಾದ ಆಕರ್ಷಕ ಕಾಮಗಾರಿಗಳು ಕಡಲಕೊರೆತಕ್ಕೆ ನೆಲಕಚ್ಚಿವೆ. ಆಕರ್ಷಕವಾಗಿ ನಿರ್ಮಾಣವಾದ ವೀಕ್ಷಣ ಗೋಪುರ, ರಸ್ತೆ, ಮೆಟ್ಟಿಲು, ವಾಕಿಂಗ್ ಪಾಥ್, ಹೀಗೆ ಹತ್ತು ಹಲವು ಕಾಮಗಾರಿಗಳು ಸಮುದ್ರದ ಅಲೆಗೆ ಕೊಚ್ಚಿ ಹೋಗಿವೆ. ಈ ಹಿನ್ನೆಲೆಯಲ್ಲಿ ಬ್ಲೂ ಫ್ಲ್ಯಾಗ್ ಸರ್ಟಿಫಿಕೇಟ್ ಸಿಗತ್ತೊ, ಇಲ್ಲವೋ ಎನ್ನುವ ಆತಂಕ ಸ್ಥಳೀಯರು ಹಾಗೂ ಗುತ್ತಿಗೆದಾರರದ್ದಾಗಿದೆ.
ಇನ್ನೂ ಬ್ಲೂ ಫ್ಲ್ಯಾಗ್ ಯೋಜನೆ ಕೇಂದ್ರ ಸರ್ಕಾರದ್ದಾಗಿದ್ದು, ಉತ್ತಮ ಬೀಚ್ಗಳನ್ನು ಗುರುತಿಸಿ ಅಂತಾರಾಷ್ಟ್ರೀಯ ಮಟ್ಟದ ಮಾನ್ಯತೆ ನೀಡಲಾಗುತ್ತದೆ. ಅದರಂತೆ ಈ ಇಕೋ ಬೀಚ್ ಸೌದರ್ಯವನ್ನ ತುಂಬಿಕೊಂಡು ಸಾವಿರಾರು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿತ್ತು. ಈ ಹಿನ್ನಲೆಯಲ್ಲಿ ಇಕೋ ಕಡಲತೀರಕ್ಕೆ ಅಂತರಾಷ್ಟ್ರೀಯ ಮಾನ್ಯತೆ ನೀಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಾಕಷ್ಟು ಕಾಮಗಾರಿಗಳನ್ನ ನಿರ್ಮಿಸಿತ್ತು. ಆದರೆ, ಉದ್ಘಾಟನೆ ಮುಂಚಿತವಾಗಿಯೇ ಇಂತ ಅವಘಡಗಳು ನಡೆದು ಹೋಗಿದ್ದು, ಹಾಕಿದ ಹಣ ನೀರಿನಲ್ಲಿ ಹೋಮವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳನ್ನ ಕೇಳಿದರೆ ಪ್ರಕೃತಿಯ ಮುನಿಸು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.
ಸಮುದ್ರದ ಕೊರೆತಕ್ಕೆ ಕಡಲತೀರ ಹಾನಿ ಆಗಿದೆ. ಕಡಲಕೊರೆತಕ್ಕೂ ಬ್ಲೂ ಫ್ಲ್ಯಾಗ್ ಸರ್ಟಿಫಿಕೇಟ್ಗೂ ಯಾವುದೇ ಸಂಬಂಧ ಇಲ್ಲ. ಈಗಾಗಲೇ ಮೊದಲ ಹಂತದಲ್ಲಿ ಎಲ್ಲವೂ ಸರಿಯಾಗಿದೆ. ಇನ್ನು, ಎರಡನೇ ಹಂತದಲ್ಲಿಯೂ ಪ್ರಯತ್ನ ಮುಂದುವರಿಸಲಾಗುವುದು. ಕೊರೆತವಾಗಿ ಹಾನಿಯಾದಲ್ಲಿ ಮತ್ತೆ ಮರು ನಿರ್ಮಾಣದ ಕೆಲಸ ಮಾಡಲಾಗುವುದು. ಇದರಿಂದ ಬ್ಲೂ ಫ್ಲ್ಯಾಗ್ ಸರ್ಟಿಫಿಕೇಟ್ಗೆ ನಡೆಸುತ್ತಿರುವ ಪ್ರಯತ್ನಕ್ಕೆ ಯಾವುದೇ ಸಮಸ್ಯೆಯಿಲ್ಲ. ಕಡಲತೀರ ಉತ್ತಮವಾಗಿದ್ದು, ಮಾನ್ಯತೆ ಸಿಗುವ ಭರವಸೆ ಇದೆ ಎಂದಿದ್ದಾರೆ.