ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಬುಡಕಟ್ಟು ಹಾಲಕ್ಕಿಗಳ ಆಗ್ರಹ: ನಿರ್ಲಕ್ಷಿಸಿದರೆ ಮತ ನೋಟಾಗೆ ಹಾಕುವ ಎಚ್ಚರಿಕೆ! ಕಾರವಾರ: ಚುನಾವಣೆ ಸಮೀಪಿಸುತ್ತಿದ್ದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೀಸಲಾತಿಗಳಿಗಾಗಿ ವಿವಿಧ ಸಮುದಾಯಗಳ ಹೋರಾಟ ಚುರುಕುಗೊಂಡಿದೆ. ಕೆಲ ದಿನಗಳ ಹಿಂದೆ ಕುಣಬಿ ಸಮುದಾಯದವರು ತಮಗೆ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಪಾದಯಾತ್ರೆ ಮಾಡುವ ಮೂಲಕ ಹೋರಾಟ ನಡೆಸಿದ್ದರು. ಇದೀಗ ಪದ್ಮಶ್ರಿ ಪುರಸ್ಕೃತರ ನೇತೃತ್ವದಲ್ಲಿ ಬುಡಕಟ್ಟು ಹಾಲಕ್ಕಿ ಸಮುದಾಯದವರು ಸಹ ತಮ್ಮನ್ನ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎನ್ನುವ ಹೋರಾಟಕ್ಕೆ ಇಳಿದಿದ್ದಾರೆ.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ರಾಜಕೀಯ ಪಕ್ಷಗಳು ಚುನಾವಣಾ ತಯಾರಿಯಲ್ಲಿದ್ದಾರೆ. ಇದರ ನಡುವೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೀಸಲಾತಿಗಾಗಿ ಸಮುದಾಯಗಳ ಹೋರಾಟ ಚುರುಕುಗೊಂಡಿದೆ. ಜಿಲ್ಲೆಯ ಜೋಯಿಡಾ ತಾಲೂಕಿನಲ್ಲಿ ಕಾಣಬರುವ ಕುಣಬಿ ಸಮುದಾಯದವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಜೋಯಿಡಾದಿಂದ ಕಾರವಾರದ ವರೆಗೆ ಪಾದಯಾತ್ರೆ ಮೂಲಕ ಹೋರಾಟ ನಡೆಸಿದ್ದರು.
ಇದರ ಬೆನ್ನಲ್ಲೇ ಹಾಲಕ್ಕಿ ಸಮುದಾಯದವರು ಹೋರಾಟ ಪ್ರಾರಂಭಿಸಿದ್ದಾರೆ. ಪದ್ಮಶ್ರೀ ಪುರಸ್ಕೃತರಾದ ಸುಕ್ರಿ ಬೊಮ್ಮಗೌಡ ಹಾಗೂ ತುಳಸಿ ಗೌಡ ನೇತೃತ್ವದಲ್ಲಿ ಹೋರಾಟಕ್ಕೆ ಮುಂದಾಗಿದ್ದಾರೆ. ಆರ್ಥಿಕವಾಗಿ, ಹಾಗೂ ಸಾಮಾಜಿಕವಾಗಿ ಹಿಂದುಳಿದ ಸಮುದಾಯವನ್ನು ಮೀಸಲಾತಿ ಮೂಲಕ ಮೇಲೆ ತರುವ ಕಾರ್ಯ ಸರ್ಕಾರ ಮಾಡಬೇಕಾಗಿದೆ. ಒಂದೊಮ್ಮೆ ಮೀಸಲಾತಿ ನೀಡದಿದ್ದರೇ ಮತವನ್ನು ಚಲಾಯಿಸಬೇಕೋ ಇಲ್ಲವೋ ಎಂದು ಸಮುದಾಯದವರು ನಿರ್ಧರಿಸಲಿದ್ದಾರೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.
ಹಾಲಕ್ಕಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಕಳೆದ ಎರಡು ದಶಕಗಳಿಂದ ಹೋರಾಟ ನಡೆಸುತ್ತಲೇ ಬರಲಾಗುತ್ತಿದೆ. ಈ ಹಿಂದೆ 2008ರಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿ ಇದ್ದ ವೇಳೆ ಹಾಲಕ್ಕಿಗಳ ಕುಲಶಾಸ್ತ್ರ ಅಧ್ಯಯನ ನಡೆಸಿ ಸಚಿವ ಸಂಪುಟದಲ್ಲಿ ಶಿಫಾರಸು ಮಾಡಿ ಕೇಂದ್ರಕ್ಕೆ ಕಳುಹಿಸಿದ್ದರು. ಆದರೆ, ಕೇಂದ್ರದಿಂದ ರಾಜ್ಯ ಸರ್ಕಾರದ ಶಿಫಾರಸು ವಾಪಸ್ ಬಂದಿತ್ತು. ಇದಾದ ನಂತರ ಪ್ರಯತ್ನ ನಡೆದರು ಇಂದಿಗೂ ಬೇಡಿಕೆ ಈಡೇರಿಲ್ಲ. ನಿಜವಾದ ಬುಡಕಟ್ಟು ಜನರಿಗೆ ನ್ಯಾಯ ಒದಗಿಸಿಕೊಡುವ ಕಾರ್ಯ ಸರ್ಕಾರ ಮಾಡಬೇಕು ಎನ್ನುವುದು ಹಾಲಕ್ಕಿಗಳ ಅಭಿಪ್ರಾಯ.
ಈ ಬಗ್ಗೆ ಜಿಲ್ಲಾ ಉಸ್ತುವಾರಿ ಹಾಗೂ ಸಮಾಜ ಕಲ್ಯಾಣ ಸಚಿವರು ಆದ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಕುಲಶಾಸ್ತ್ರೀಯ ಅಧ್ಯಯನ ನಡೆಸಿ ಕಳುಹಿಸಿದಾಗ ಹೀಗೆ ಹಲವು ಬಾರಿ ವಾಪಸ್ ಬರುವುದು ಸಹಜ. ಹಾಗಂತ ಅದು ತಿರಸ್ಕಾರ ಎಂದೂ ತಿಳಿಯಬೇಕಿಲ್ಲ. ಅವರಿಗೆ ಬೇಕಾದ ಮಾಹಿತಿ ಇಲ್ಲದ ಕಾರಣ ವಾಪಸ್ ಕಳುಹಿಸಲಾಗುತ್ತಿದೆ. ಶೀಘ್ರದಲ್ಲೇ ಮತ್ತೊಮ್ಮೆ ಕುಲಶಾಸ್ತ್ರ ಅಧ್ಯಯನ ಮಾಡಿಸಿ ರಾಜ್ಯದಿಂದ ಶಿಫಾರಸನ್ನು ಕೇಂದ್ರಕ್ಕೆ ಕಳುಹಿಸುವುದಾಗಿ ಭರವಸೆ ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಜನರು ಹಾಲಕ್ಕಿ ಸಮುದಾಯದಲ್ಲಿದ್ದು ಈ ಬಾರಿ ಸರ್ಕಾರ ತಮ್ಮ ಬೇಡಿಕೆ ಈಡೇರಿಸದಿದ್ದರೇ ಮತದಾನದ ವೇಳೆ ನೋಟಾ ಮೊರೆ ಹೋಗಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನ ಸಹ ನೀಡಿದ್ದಾರೆ. ಒಟ್ಟಿನಲ್ಲಿ ರಾಜ್ಯದ ಬೇರೆ ಜಿಲ್ಲೆಗಳಲ್ಲಿ ನಡೆದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಹ ಮೀಸಲಾತಿ ಹೋರಾಟಗಳು ಚುನಾವಣೆ ಸಮೀಪಿಸುತ್ತಿದ್ದಂತೆ ಚುರುಕುಗೊಂಡಿದ್ದು ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎನ್ನುವುದನ್ನ ಕಾದು ನೋಡಬೇಕಾಗಿದೆ.
ಇದನ್ನೂ ಓದಿ:ಕುರಿ ಸಾಕಣೆ ಮಾಡುವುದು ಹೇಗೆ, ಸರ್ಕಾರದಿಂದ ಸಿಗುವ ನೆರವು ಏನು? ಇಲ್ಲಿದೆ ಸಂಪೂರ್ಣ ಮಾಹಿತಿ