ಕಾರವಾರ: ಅದು ಪ್ರಕೃತಿ ಸೌಂದರ್ಯದ ನಡುವೆ ಇರುವ ಸುಂದರ ಗ್ರಾಮ. ಆ ಗ್ರಾಮದಲ್ಲಿ ತಲೆ ತಲಾಂತರಗಳಿಂದ ಜನರು ಕೃಷಿ ಮಾಡುತ್ತಿದ್ದಾರೆ. ಆದರೆ ಆ ಗ್ರಾಮದಲ್ಲಿ ಗ್ರಾಮಸ್ಥರು ಮನೆ ಕಟ್ಟಿಕೊಳ್ಳುವಂತಿಲ್ಲ. ಹೊಲಗದ್ದೆಗಳನ್ನು ತಮ್ಮದು ಅಂತಾ ಹೇಳಿಕೊಳ್ಳುವಂತಿಲ್ಲ. ಜೊತೆಗೆ ಯಾವಾಗ ಅಧಿಕಾರಿಗಳು ಬಂದು ಗ್ರಾಮಸ್ಥರನ್ನು ಒಕ್ಕಲೆಬ್ಬಿಸುತ್ತಾರೋ ಎನ್ನುವ ಆತಂಕದಲ್ಲಿರುವಂತಾಗಿದೆ.
ಇದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೋರಳ್ಳಿ ಗ್ರಾಮದಲ್ಲಿ ಹಲವು ದಶಕಗಳಿಂದ ಅರಣ್ಯ ಪ್ರದೇಶದಲ್ಲೇ ಜೀವನ ಕಟ್ಟಿಕೊಂಡ ಸಾಕಷ್ಟು ಕುಟುಂಬಗಳ ಕಥೆ-ವ್ಯಥೆ. ಇಲ್ಲಿನ ಜನ ಗದ್ದೆ, ತೋಟ ನಿರ್ಮಿಸಿಕೊಂಡು ಕೃಷಿ ಮಾಡಿಕೊಂಡೇ ಬದುಕು ಸಾಗಿಸಿಕೊಂಡು ಬರುತ್ತಿದ್ದಾರೆ. ತಲೆ ತಲೆಮಾರುಗಳಿಂದಲೂ ಇದೇ ಪ್ರದೇಶದಲ್ಲೇ ವಾಸವಾಗಿದ್ದರೂ ಸಹ ಆ ಜಾಗ, ಕೃಷಿ ಮಾಡುತ್ತಿರುವ ಜಮೀನು ಅವರ ಹೆಸರಿಗಿಲ್ಲ. ಇದುವರೆಗೂ ಸರ್ಕಾರದ ದೃಷ್ಠಿಯಲ್ಲಿ 'ಅತಿಕ್ರಮಣದಾರ'ರಾಗಿಯೇ ಉಳಿದುಕೊಂಡಿದ್ದು, ಅವರಿಗೆ ಪಟ್ಟಾ ಕೊಡುವ ಕೆಲಸ ಮಾಡಿಲ್ಲ.
ಹುಟ್ಟಿ ಬೆಳೆದ ಜಾಗದಲ್ಲೇ ಆತಂಕದ ಬದುಕು:ಗುಡಿಸಲುಗಳಲ್ಲಿ ಬದುಕುತ್ತಿದ್ದವರು ಚಿಕ್ಕದಾಗಿ ಹೆಂಚಿನ ಮನೆಗಳನ್ನ ಕಟ್ಟಿಕೊಂಡಿದ್ದಾರೆ. ಅಂತಹ ಮನೆಗಳನ್ನು ದೊಡ್ಡದಾಗಿ ನಿರ್ಮಿಸಲು ಇಲ್ಲವೇ ರಿಪೇರಿ ಕಾರ್ಯ ಮಾಡಲು ಅರಣ್ಯ ಇಲಾಖೆ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ. ಮನೆ ನಿರ್ಮಾಣಕ್ಕೆ ಮುಂದಾದಲ್ಲಿ ತಕ್ಷಣವೇ ಆಗಮಿಸುವ ಸಿಬ್ಬಂದಿ ಮನೆ ಕಟ್ಟದಂತೆ ಎಚ್ಚರಿಕೆ ನೀಡಿ ತೆರಳುತ್ತಾರೆ. ಹೀಗಾಗಿ ಹುಟ್ಟಿ ಬೆಳೆದ ಜಾಗದಲ್ಲೇ ನಮಗೆ ಮನೆ ಕಟ್ಟಿಕೊಳ್ಳುವುದು ಸಾಧ್ಯವಿಲ್ಲದಂತಾಗಿದ್ದು, ಬೇರೆ ಜಾಗವನ್ನೂ ಕೊಡದಿರುವುದರಿಂದ ಸಂಕಷ್ಟ ಎದುರಿಸುವಂತಾಗಿದೆ ಅನ್ನೋದು ಗ್ರಾಮಸ್ಥರ ಆಳಲು.