ಕಾರವಾರ:ಆರ್ಥಿಕ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿರುವ ಶ್ರೀಲಂಕಾಕ್ಕೆ ಭಾರತ ನೌಕಾನೆಲೆಯ ಐಎನ್ಎಸ್ ಘರಿಯಾಲ್ ಯುದ್ಧನೌಕೆ ಮುಖಾಂತರ ತುರ್ತು ಪರಿಹಾರ ಸಾಮಗ್ರಿಗಳನ್ನು ಕಳುಹಿಸಿಕೊಟ್ಟಿದೆ. ಈ ಬಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ನೌಕೆಯ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು. ಕಾರವಾರದ ಕದಂಬ ನೌಕಾನೆಲೆಗೆ ಎರಡು ದಿನಗಳ ಭೇಟಿಯ ನಿಮಿತ್ತ ಆಗಮಿಸಿರುವ ರಕ್ಷಣಾ ಸಚಿವರು, ಶ್ರೀಲಂಕಾ ತಲುಪಿರುವ ಐಎನ್ಎಸ್ ಘರಿಯಾಲ್ ಯುದ್ಧನೌಕೆಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಐಎನ್‌ಎಸ್ ಕದಂಬ ನೌಕಾನೆಲೆಗೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಭೇಟಿ ಐಎನ್ಎಸ್ ಘರಿಯಾಲ್ ಶ್ರೀಲಂಕಾದ ಕೊಲಂಬೋ ತಲುಪಿದ್ದು, ಸಂಕಷ್ಟದಲ್ಲಿರುವ ನೆರೆಯ ರಾಷ್ಟ್ರಕ್ಕೆ ಸಹಾಯಹಸ್ತ ಚಾಚುವಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ನೌಕಾಪಡೆಯ ಕಾರ್ಯವನ್ನು ಸಚಿವ ರಾಜನಾಥ ಸಿಂಗ್ ಶ್ಲಾಘಿಸಿದ್ದಾರೆ. ನೆರೆಹೊರೆಯವರಿಗೆ ಮೊದಲು ಎನ್ನುವ ಭಾರತದ ನೀತಿ ಹಾಗೂ ದೇಶದ ಕರಾವಳಿಯ ಹತ್ತಿರದ ದೇಶವಾದ ಶ್ರೀಲಂಕಾದೊಂದಿಗೆ ಹಿಂದಿನಿಂದಲೂ ಹೊಂದಿರುವ ಉತ್ತಮ ಬಾಂಧವ್ಯಕ್ಕೆ ಭಾರತ ಒತ್ತು ನೀಡುವುದನ್ನು ಸ್ಮರಿಸಿದರು.
ತುರ್ತು ಪರಿಹಾರ ಸಾಮಗ್ರಿಗಳೊಂದಿಗೆ ಐಎನ್ಎಸ್ ಘರಿಯಾಲ್ ಶ್ರೀಲಂಕಾ ತಲುಪಿರುವ ಕುರಿತು ಸಂತಸ ವ್ಯಕ್ತಪಡಿಸಿದ ರಕ್ಷಣಾ ಸಚಿವರು, ಅಗತ್ಯ ಸಂದರ್ಭಗಳಲ್ಲಿ ಸ್ನೇಹ ಬಾಂಧವ್ಯ ಹೊಂದಿರುವ ರಾಷ್ಟ್ರಗಳಿಗೆ ಬೆಂಬಲವಾಗಿ ನಿಲ್ಲುವ ಭಾರತದ ಪ್ರಾಚೀನ ಸಂಪ್ರದಾಯಕ್ಕೆ ಇದು ಅನುಗುಣವಾಗಿದೆ ಎಂದು ತಿಳಿಸಿದರು.
ಖಂಡೇರಿ ಜಲಾಂತರ್ಗಾಮಿ ನೌಕೆಯಲ್ಲಿ ರಾಜನಾಥ ಸಿಂಗ್ ಸಮುದ್ರಯಾನ ರಾಜನಾಥ ಸಿಂಗ್ ಸಮುದ್ರಯಾನ:ಐಎನ್‌ಎಸ್ ಕದಂಬ ನೌಕಾನೆಲೆಗೆ ಎರಡು ದಿನ ಭೇಟಿಗೆ ಆಗಮಿಸಿದ್ದ ರಕ್ಷಣಾ ಸಚಿವ ರಾಜನಾಥ ಸಿಂಗ್ ಸ್ವದೇಶಿ ನಿರ್ಮಿತ ಐಎನ್‌ಎಸ್ ಖಂಡೇರಿ ಜಲಾಂತರ್ಗಾಮಿ ನೌಕೆಯಲ್ಲಿ ಸಮುದ್ರಯಾನ ನಡೆಸಿದರು.
ಖಂಡೇರಿ ಜಲಾಂತರ್ಗಾಮಿ ನೌಕೆಯಲ್ಲಿ ರಾಜನಾಥ ಸಿಂಗ್ ಸಮುದ್ರಯಾನ ಶುಕ್ರವಾರ ಬೆಳಗ್ಗೆ ಸೀಬರ್ಡ್ ನೌಕಾನೆಲೆಯಿಂದ ಸ್ವದೇಶಿ ನಿರ್ಮಿತ ಕಲ್ವಾರಿ ಕ್ಲಾಸ್‌ನ ಸಬ್ ಮೆರಿನ್ ಐಎನ್‌ಎಸ್ ಖಂಡೇರಿಯಲ್ಲಿ ಸಮುದ್ರಯಾನ ನಡೆಸಿದ ಸಚಿವರು, 4 ಗಂಟೆಗೂ ಹೆಚ್ಚು ಕಾಲ ಕಳೆದರು. ಈ ವೇಳೆ ನೌಕಾ ನೆಲೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು, ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದರು.
ಐಎನ್‌ಎಸ್ ಕದಂಬ ನೌಕಾನೆಲೆಗೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಭೇಟಿ ಖಂಡೇರಿ ಮೇಕ್ ಇನ್ ಇಂಡಿಯಾ ಉಪಕ್ರಮದ ಪ್ರಾಜೆಕ್ಟ್ 75 ಜಲಾಂತರ್ಗಾಮಿ ನೌಕೆಗಳಲ್ಲಿ ಎರಡನೇಯದ್ದಾಗಿದೆ. ಫ್ರಾನ್ಸ್ ಸಹಕಾರದಲ್ಲಿ ಮುಂಬೈನ ಮಜಗಾಂವ್ ಶಿಪ್ ಯಾರ್ಡ್ನಲ್ಲಿ ಈ ಸಬ್ ಮರಿನ್ ನಿರ್ಮಿಸಲಾಗಿದೆ. 350 ಮೀಟರ್ ಆಳದಲ್ಲಿ 50 ದಿನಗಳ ಕಾಲ ಗಸ್ತು ತಿರುಗುವ ಸಾಮರ್ಥ್ಯ ಹೊಂದಿರುವ ಈ ಅತ್ಯಾಧುನಿಕ ಜಲಾಂತರ್ಗಾಮಿ ನೌಕೆ ನೀರಿನ ಮೇಲ್ಮೈನಲ್ಲಿ 1,615 ಟನ್ ಮತ್ತು ನೀರಿನಾಳದಲ್ಲಿ 1,775 ಟನ್ ಭಾರವಿರಲಿದೆ. 221 ಫೀಟ್ ಉದ್ದದ, 40 ಫೀಟ್ ಎತ್ತರ ಇದ್ದು, 2019ರಲ್ಲಿ ರಾಜನಾಥ್ ಸಿಂಗ್ ಅವರೇ ರಕ್ಷಣಾ ಸಚಿವರಿದ್ದಾಗ ಇದನ್ನು ಲೋಕಾರ್ಪಣೆಗೊಳಿಸಿದ್ದರು.
ಇದನ್ನೂ ಓದಿ:ಐಎನ್ಎಸ್ ಖಂಡೇರಿ ಸಬ್ ಮೆರಿನ್ ಮೂಲಕ ರಕ್ಷಣಾ ಸಚಿವರ ಸಮುದ್ರಯಾನ