ಕರ್ನಾಟಕ

karnataka

ETV Bharat / state

ರೇಷ್ಮೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ, ಮಾರುಕಟ್ಟೆ ಅಲಭ್ಯತೆ : ಜಿಲ್ಲೆಯಲ್ಲಿ ರೇಷ್ಮೆ ಕೃಷಿ ಕುಂಠಿತ - ಜಿಲ್ಲೆಯಲ್ಲಿ ರೇಷ್ಮೆ ಕೃಷಿ ಕುಂಠಿತ

ಉತ್ತರಕನ್ನಡ ಜಿಲ್ಲೆಯಲ್ಲಿ ಜಿಲ್ಲಾಮಟ್ಟದ ರೇಷ್ಮೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಜೊತೆಗೆ ರೇಷ್ಮೆ ಕೃಷಿಗೆ ಸೂಕ್ತ ಮಾರುಕಟ್ಟೆ ಇಲ್ಲದಿರುವುದರಿಂದ ಜಿಲ್ಲೆಯ ರೈತರು ರೇಷ್ಮೆ ಕೃಷಿಯಿಂದ ವಿಮುಖರಾಗುತ್ತಿದ್ದಾರೆ.

Etv Bharat
Etv Bharat

By ETV Bharat Karnataka Team

Published : Sep 26, 2023, 6:18 PM IST

ಶಿರಸಿ (ಉತ್ತರಕನ್ನಡ) :ಜಿಲ್ಲೆಯಲ್ಲಿರುವ ಜಿಲ್ಲಾಮಟ್ಟದ ರೇಷ್ಮೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದು, ರೈತರಿಗೆ ರೇಷ್ಮೆ ಉತ್ಪಾದನೆಗೆ ಬೇಕಾದ ಪೂರಕ ಪ್ರೋತ್ಸಾಹ ದೊರೆಯುತ್ತಿಲ್ಲ. ಇದರಿಂದಾಗಿ ರೇಷ್ಮೆ ಕೃಷಿಯಿಂದ ರೈತರು ವಿಮುಖರಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಶೆ.98ರಷ್ಟು ಸಿಬ್ಬಂದಿ ಕೊರತೆ, ಮಾರುಕಟ್ಟೆ ಅಲಭ್ಯತೆಯಿಂದಾಗಿ ರೇಷ್ಮೆ ಕೃಷಿ ಕುಂಠಿತವಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ರೇಷ್ಮೆ ಇಲಾಖೆಯ ಜಿಲ್ಲಾಮಟ್ಟದ ಮುಖ್ಯ ಕಚೇರಿ ಶಿರಸಿ ನಗರದ ಬನವಾಸಿ ರಸ್ತೆಯಲ್ಲಿದೆ. ಜಿಲ್ಲಾ ಕಟ್ಟಡವನ್ನೂ ಸೇರಿದಂತೆ ಇಲ್ಲಿರುವ ಅನೇಕ ಕಟ್ಟಡಗಳು ಸರಿಯಾದ ಬಳಕೆಯಾಗುತ್ತಿಲ್ಲ. 12 ತಾಲ್ಲೂಕುಗಳನ್ನೊಳಗೊಂಡ ಜಿಲ್ಲೆಗೆ 69 ಹುದ್ದೆ ಮೀಸಲಿರಿಸಲಾಗಿದ್ದು, ಕೇವಲ 2 ಮಂದಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ರೇಷ್ಮೆಗೆ ಪ್ರೋತ್ಸಾಹ ಇಲ್ಲದೇ ರೈತರ ಸಂಖ್ಯೆ 436ಕ್ಕೆ ಇಳಿದಿದೆ. ಇದರಿಂದ ಹಳಿಯಾಳ, ಮುಂಡಗೋಡ, ಸಿದ್ದಾಪುರ ಭಾಗಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ರೇಷ್ಮೆ ಉತ್ತಮ ಬೆಳೆಯಾಗಿದ್ದರೂ, ಮಾರುಕಟ್ಟೆ ಕೊರತೆಯಿಂದ ಜಿಲ್ಲೆಯಲ್ಲಿ ರೇಷ್ಮೆ ಕೃಷಿ ಕಡಿಮೆಯಾಗುತ್ತಿದೆ ಎಂದು ರೇಷ್ಮೆ ಇಲಾಖೆಯ ಜಿಲ್ಲಾ ಪ್ರಭಾರಿ ಶ್ರೀಧರ ಹೆಗಡೆ ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ರೇಷ್ಮೆ ಬೆಳೆಗಾರ ಜಯಪ್ರಕಾಶ್, ಕಳೆದ 15 ವರ್ಷದಲ್ಲಿ ರೇಷ್ಮೆ ಪ್ರಗತಿಯಲ್ಲಿ ಸಾಕಷ್ಟು ಏರಿಳಿತ ಉಂಟಾಗಿದೆ. ಇತ್ತೀಚಿನ ದಿನಗಳಲ್ಲಿ ಅತೀ ಕಡಿಮೆ ರೇಷ್ಮೆ ಉತ್ಪಾದನೆ ಆಗುತ್ತಿದೆ. ಇದಕ್ಕೆ ಬೆಳೆಗಾರರ ಜತೆ ನಿಕಟ ಸಂಪರ್ಕ ಸಾಧಿಸಿ ಕಾಲಕಾಲಕ್ಕೆ ಯೋಜನೆಗಳ ಕುರಿತು ಮಾಹಿತಿ ನೀಡಬೇಕಿದ್ದ ಪ್ರದರ್ಶಕ ಮತ್ತು ಪ್ರವರ್ತಕ ಹುದ್ದೆಗಳು ನೇಮಕಾತಿ ಆಗದಿರುವುದೂ ಒಂದು ಕಾರಣವಾಗಿದೆ ಎಂದು ಹೇಳಿದರು.

ಅಲ್ಲದೇ ಈ ಮೊದಲು ಶಿರಸಿಯಲ್ಲೇ ರೇಷ್ಮೆ ಖರೀದಿ ಕೇಂದ್ರವಿತ್ತು. ಈಗ ಅದನ್ನು ಮುಚ್ಚಲಾಗಿದೆ. ಈಗ ಜಿಲ್ಲೆಯ ರೈತರು ಉತ್ಪಾದಿಸಿದ ರೇಷ್ಮೆಯನ್ನು ಮಾರಾಟ ಮಾಡಲು ದೂರದ ಹಾಸನ, ಶಿರಹಟ್ಟಿ, ತುಮಕೂರು ಜಿಲ್ಲೆಗಳಿಗೆ ಹೋಗಬೇಕಾಗಿದೆ. ಹೀಗಾಗಿ ಈ ಕೃಷಿಯನ್ನೇ ಕೈಬಿಡುವ ಆಲೋಚನೆಯಲ್ಲಿ ಅಳುದುಳಿದ ರೈತರಿದ್ದಾರೆ. ಇದರಿಂದ ಜಿಲ್ಲೆಗೆ ರೇಷ್ಮೆ ಮಾರುಕಟ್ಟೆ ಹಾಗೂ ಸಿಬ್ಬಂದಿಗಳ ಪೂರೈಕೆ ಆದಲ್ಲಿ ಮಾತ್ರ ಬೆಳೆಗೆ ಭವಿಷ್ಯವಿದೆ. ಇಲ್ಲದೇ ಹೋದಲ್ಲಿ ಅಳಿದುಳಿದ ರೈತರೂ ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.‌ ಸಿಬ್ಬಂದಿಗಳ ಕೊರತೆ, ರೇಷ್ಮೆಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದರಿಂದ ರೇಷ್ಮೆ ಉತ್ಪಾದನೆ ಕಡಿಮೆಯಾಗಿದೆ. ಹೀಗಾಗಿ ಸರ್ಕಾರದ ಜಿಲ್ಲೆಗೆ ಅನುದಾನ ಘೋಷಣೆ ಮಾಡಿ, ರೇಷ್ಮೆ ಬೆಳೆಯನ್ನು ಪ್ರೋತ್ಸಾಹಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ :ದಾವಣಗೆರೆ : ಗುಡ್ಡಗಾಡು ಪ್ರದೇಶದಲ್ಲಿ 25 ಸಾವಿರ ಗಿಡ ನೆಟ್ಟ ಮಹಿಳೆಗೆ ರಾಷ್ಟ್ರ ಪ್ರಶಸ್ತಿ

ABOUT THE AUTHOR

...view details