ಕಾರವಾರ:ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಭಟ್ಕಳದಲ್ಲಿ ಹೆಲ್ತ್ ಎಮರ್ಜೆನ್ಸಿ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ. ಹರೀಶಕುಮಾರ್ ಹೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ಕೊರೊನಾ ವೈರಸ್ ತಡೆಯಲು ಈಗಾಗಲೇ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಭಟ್ಕಳದಲ್ಲಿ ಈಗಾಗಲೇ ಎರಡು ಪ್ರಕರಣಗಳಲ್ಲಿ ಸೋಂಕು ದೃಢಪಟ್ಟಿದೆ. ಆದರೆ, ಈ ಸೋಂಕಿತರ ಸಂಪರ್ಕಕ್ಕೆ ಬಂದಂತಹ ಸುಮಾರು 40 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದರು.
ಭಟ್ಕಳದಲ್ಲಿ ವಿದೇಶದಿಂದ ಬಂದಿರುವವರ ಸಂಖ್ಯೆ ಹೆಚ್ಚಿರುವ ಕಾರಣ ಭಟ್ಕಳ ಪಟ್ಟಣ, ಜಾಲಿ, ಹೆಬಳೆ, ಮಾವಿನಕುರ್ವ, ಮುಂಡಳ್ಳಿ, ಯಲವಡಿಕಾವೂರು ಹಾಗೂ ಮುಠಳ್ಳಿ ಪಂಚಾಯತ್ ವ್ಯಾಪ್ತಿಯಲ್ಲಿ ತುರ್ತಾಗಿ ಹೆಲ್ತ್ ಎಮರ್ಜೆನ್ಸಿ ಘೋಷಿಸಲಾಗಿದೆ ಎಂದು ತಿಳಿಸಿದರು.
ಭಟ್ಕಳದಲ್ಲಿ ಹೆಲ್ತ್ ಎಮರ್ಜೆನ್ಸಿ ಘೋಷಣೆ ಆದರೆ, ಎಮರ್ಜೆನ್ಸಿಯಿಂದ ಭಟ್ಕಳದ ಜನರು ಹೆದರುವ ಅವಶ್ಯಕತೆ ಇಲ್ಲ. ಈಗಿರುವ ಲಾಕ್ಡೌನ್ ಅನ್ನು ಕೆಲವರು ಪಾಲಿಸದ ಕಾರಣ, ಅಂತವರಿಂದ ಸಮುದಾಯಕ್ಕೆ ಹರಡುವ ಆತಂಕದಿಂದಾಗಿ ಹೆಲ್ತ್ ಎಮರ್ಜೆನ್ಸಿ ಘೋಷಿಸಲಾಗಿದೆ. ಈ ಅವಧಿಯಲ್ಲಿ ಯಾರೂ ಕೂಡಾ ಹೊರಗಡೆ ಓಡಾಡುವ ಹಾಗಿಲ್ಲ. ಜನರಿಗೆ ಅವಶ್ಯವಿರುವ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುವುದು. ಪೊಲೀಸರು ಭಟ್ಕಳದಲ್ಲಿ ತೀವ್ರ ನಿಗಾ ಇಡಲಿದ್ದು, ಸುಳ್ಳು ಸುದ್ದಿಗಳನ್ನು ಹರಡುವ ವಾಟ್ಸಪ್ ಗ್ರೂಪ್ ಅಡ್ಮಿನ್ಗಳ ಮೇಲೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇನ್ನು ಮುಂದೆ ಭಟ್ಕಳದಲ್ಲಿಯೇ ಗಂಟಲು ದ್ರವ ಪರೀಕ್ಷೆ ನಡೆಸಲಾಗುತ್ತದೆ. ಹೀಗೆ ಪರೀಕ್ಷೆಗೆ ಒಳಗಾದವರನ್ನು ಆರ್.ಎನ್.ಎಸ್ ಆಸ್ಪತ್ರೆಯಲ್ಲಿ ಕ್ವಾರಂಟೈನ್ನಲ್ಲಿ ಇಡಲಾಗುತ್ತದೆ. ಸೋಂಕು ಖಚಿತವಾದಲ್ಲಿ ಅಂತವರನ್ನು ನೌಕಾನೆಲೆಯ ಪತಂಜಲಿ ಆಸ್ಪತ್ರೆಗೆ ಸಾಗಿಸಲಾಗುವುದು ಎಂದು ಮಾಹಿತಿ ನೀಡಿದರು.