ಕಾರವಾರ: ಡೆತ್ನೋಟ್ನಲ್ಲಿ ಪೊಲೀಸರ ಹೆಸರು ನಮೂದಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಸ್ಪೆಕ್ಟರ್, ಪಿಎಸ್ಐ ಹಾಗೂ ಓರ್ವ ಪೊಲೀಸ್ ಕಾನ್ಸ್ಟೇಬಲ್ನನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಕಾರವಾರ ಗ್ರಾಮೀಣ ಠಾಣೆ ಇನ್ಸ್ಪೆಕ್ಟರ್ ಕುಸುಮಾಧರ್, ಪಿಎಸ್ಐ ಶಾಂತಿನಾಥ, ಕಾನ್‌ಸ್ಟೇಬಲ್ ದೇವರಾಜ ಅಮಾನತುಗೊಂಡವರಾಗಿದ್ದಾರೆ. ಕಾರವಾರ ತಾಲೂಕಿನ ಶಿರವಾಡ ನಿವಾಸಿ ಮಾರುತಿ ನಾಯ್ಕ ಇತ್ತೀಚೆಗೆ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ, ಡೆತ್ನೋಟ್ ಎರಡನೇ ದಿನ ಲಭ್ಯವಾದ ಕಾರಣ ಪೊಲೀಸರು ಅನುಮಾನ ವ್ಯಕ್ತಪಡಿಸಿ ಡೆತ್ನೋಟ್ ಅನ್ನು ಎಫ್ಎಸ್ಎಲ್ಗೆ ಕಳುಹಿಸಿದ್ದರು. ಆದರೆ, ಇದೀಗ ವಿಡಿಯೋ ಕೂಡ ಲಭ್ಯವಾದ ಕಾರಣ ಐಜಿ ಚಂದ್ರಗುಪ್ತ ಅವರ ಸೂಚನೆಯಂತೆ ಎಸ್ಪಿ ವಿಷ್ಣುವರ್ಧನ್ ಇಲಾಖಾ ತನಿಖೆ ಮುಕ್ತಾಯದವರೆಗೆ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ದಲಿತ ಮುಖಂಡ ಎಲಿಷಾ ಎಲಕಪಾಟಿ ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡಿದ್ದನ್ನು ಮಾರುತಿ ನಾಯ್ಕ ವಿಡಿಯೋ ಮಾಡಿ ಬಳಿಕ ದೂರು ನೀಡಿದ್ದರು. ಆದರೆ, ಪ್ರಕರಣ ತನಿಖೆ ನೆಪದಲ್ಲಿ ಪೊಲೀಸರು ಕಿರುಕುಳ ನೀಡಿದ್ದಾಗಿ ಮಾರುತಿ ಡೆತ್ನೋಟ್ ಹಾಗೂ ವಿಡಿಯೋ ಮೂಲಕ ಆರೋಪಿಸಿದ್ದರು. ಕುಟುಂಬಸ್ಥರು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ತೀವ್ರವಾಗಿ ಆಗ್ರಹಿಸಿದ ಬಳಿಕ ಎಲಿಷಾ ಎಲಕಪಾಟಿ ಸೇರಿದಂತೆ ಮೂವರನ್ನು ಬಂಧಿಸಿದ್ದರು.