ಕಾರವಾರ: ಆಸ್ತಿಗಾಗಿ ಸ್ವಂತ ಮಗನೇ ತಂದೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪ ಯಲ್ಲಾಪುರ ತಾಲೂಕಿನ ಹೆಮ್ಮಾಡಿಯ ಕುಂಬ್ರಿಯಲ್ಲಿ ಕೇಳಿಬಂದಿದ್ದು, ಇದೀಗ ಆರೋಪಿ ಮಗನ ವಿರುದ್ಧ ಕ್ರಮಕ್ಕಾಗಿ ತಂದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.
ಸ್ವಂತ ಮಗನಿಂದಲೇ ಮಾರಣಾಂತಿಕ ಹಲ್ಲೆ: ನ್ಯಾಯಕ್ಕಾಗಿ ಎಸ್ಪಿ ಕಚೇರಿ ಮೆಟ್ಟಿಲೇರಿದ ವೃದ್ಧ - ಮಗನಿಂದ ತಂದೆ ಮೇಲೆ ಹಲ್ಲೆ
ನನಗೆ ಹಲ್ಲೆ ಮಾಡಿ ನನ್ನ ಹೆಂಡತಿಗೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ಮಗನಿಂದಲೇ ಹಲ್ಲೆಗೊಳಗಾದ ತಂದೆ ದೂರು ನೀಡಿದ್ದು, ನ್ಯಾಯಕ್ಕಾಗಿ ಪೊಲೀಸ್ ಮೊರೆ ಹೋಗಿದ್ದಾರೆ.
ಯಲ್ಲಾಪುರ ತಾಲೂಕಿನ ಕುಂಬ್ರಿಯ ನಾಗಪ್ಪ ಗಣಪತಿ ಭಂಡಾರಿ ತಮ್ಮ ಮಗ ಪ್ರಭಾಕರ್ ಭಂಡಾರಿ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ತಾನು, ಪತ್ನಿ ನಾಗಿ ನಾಗಪ್ಪ ಭಂಡಾರಿಯೊಂದಿಗೆ ವಾಸವಿದ್ದು, ಮಗನಾದ ಪ್ರಭಾಕರ್ ಭಂಡಾರಿ ಆಸ್ತಿಗಾಗಿ ವೃದ್ಧರಾದ ನಮ್ಮ ಮೇಲೆ ಪದೇ ಪದೇ ಹಲ್ಲೆ ಮಾಡಿ ತೊಂದರೆ ನೀಡುತ್ತಿದ್ದ. ಈ ನಡುವೆ ಜ.19 ರಂದು ಮನೆಗೆ ಬಂದು ಆಸ್ತಿಯ ವಿಚಾರವಾಗ ಜಗಳವಾಡಿ ನನ್ನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ನನ್ನ ಪತ್ನಿಗೆ ಜೀವ ಬೆದರಿಕೆಯೊಡ್ಡಿದ್ದಾನೆ ಎಂದು ಅರೋಪಿಸಿದ್ದಾರೆ.
ಘಟನೆ ಬಳಿಕ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಹುಬ್ಬಳ್ಳಿ ಹಾಗೂ ಶಿರಸಿಯಲ್ಲಿ 8 ದಿನ ಚಿಕಿತ್ಸೆ ಪಡೆದಿದ್ದೇನೆ. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ವರೆಗೂ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ.