ಭಟ್ಕಳ :ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತಾಲೂಕಾಡಳಿತ ಇಂದಿನಿಂದ ತಾಲೂಕಿನ ಎಲ್ಲಾ ಮನೆಗಳಿಗೆ ಭೇಟಿ ನೀಡಿ ಕೊರೊನಾ ಪರೀಕ್ಷೆ ನಡೆಸಲು ಪ್ರಾರಂಭಿಸಿದೆ.
ಭಟ್ಕಳ ತಾಲೂಕಿನಲ್ಲಿ ಮನೆ ಮನೆಗೆ ತೆರಳಿ ಕೊರೊನಾ ಪರೀಕ್ಷೆ ಮೊದಲನೇ ದಿನದ ಮೊದಲ ಹಂತವಾಗಿ ಇಲ್ಲಿನ ನೆಹರು ರಸ್ತೆ ಹಾಗೂ ಹೊಂಡದ ಕೇರಿ ಸುತ್ತಮುತ್ತಲಿನ ನಿವಾಸಿಗಳ ಕೊರೊನಾ ಪರೀಕ್ಷೆ ನಡೆಸಲಾಗಿದೆ. ಒಟ್ಟು ನೆಹರು ರಸ್ತೆ ಹಾಗೂ ಹೊಂಡದಕೇರಿ ವ್ಯಾಪ್ತಿಯಲ್ಲಿ 85 ಜನರ ರ್ಯಾಪಿಡ್ ಪರೀಕ್ಷೆಯಲ್ಲಿ 2 ಪಾಸಿಟಿವ್ ಪ್ರಕರಣ ಬಂದಿವೆ. ಅವರು ಹೋಮ್ ಐಸೋಲೇಶನ್‌ನಲ್ಲಿದ್ದಾರೆ.
ಬೇರೆ ಬೇರೆ ಕಾರಣದಿಂದ ಸರ್ಕಾರಿ ಆಸ್ಪತ್ರೆಗೆ 40 ಮಂದಿ ಬಂದು ರ್ಯಾಪಿಡ್ ಆಟಿಜೆನ್ ಪರೀಕ್ಷೆ ಮಾಡಿಸಿದ್ದಾರೆ. ಅದರಲ್ಲಿ 3 ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಸದ್ಯ ಎಲ್ಲರ ಗಂಟಲು ದ್ರವವನ್ನು ಕಾರವಾರದ ಕೋವಿಡ್ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕವಷ್ಟೇ ಪಾಸಿಟಿವ್-ನೆಗೆಟಿವ್ ಪ್ರಕರಣ ತಿಳಿದು ಬರಬೇಕಾಗಿದೆ.
ಮುಖ್ಯವಾಗಿ ಜನರು ಇದಕ್ಕೆ ಸಹಕರಿಸಬೇಕಾಗಿದೆ. ಕಾರಣ ತಾಲೂಕಿನಲ್ಲಿ ಕೊರೊನಾದಿಂದ ಸಾವಿನ ಪ್ರಮಾಣ ಕಡಿಮೆ ಮಾಡಲು ಮನೆ ಮನೆಗೆ ತೆರಳಿ ಕೊರೊನಾ ಪರೀಕ್ಷೆ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲಾ ಸಾರ್ವಜನಿಕರನ್ನು ಕೊರೊನಾ ತಪಾಸಣೆ ಮಾಡಲು ಒಳಪಡಿಸಲಾಗುತ್ತದೆ.
ಪರೀಕ್ಷೆಗೆ ಒಳಪಡದಿರುವವರಿಗೆ ಅವರಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿ ಪರೀಕ್ಷೆಗೆ ಒಳಪಡಿಸುತ್ತೇವೆ. ಯಾರಿಗೂ ಸಹ ಒತ್ತಾಯಪೂರ್ವಕ ಪರೀಕ್ಷೆಗೊಳಪಡಿಸಲ್ಲ ಎಂದು ತಾಲೂಕಾಸ್ಪತ್ರೆಯ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಹೇಳಿದ್ದಾರೆ.