ಕರ್ನಾಟಕ

karnataka

ETV Bharat / state

ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಗೆ ಸಕಲ ಸಿದ್ಧತೆ; ಡಿಸಿ ಹರೀಶ್ ಕುಮಾರ್

ರಾಜ್ಯದಲ್ಲಿ ಕೊರೊನಾ ಆತಂಕದ ನಡುವೆಯೇ ಶಿಕ್ಷಕ ಹಾಗೂ ಪದವೀಧರರ ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿದೆ. ಈ ಹಿನ್ನೆಲೆ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಒಳಪಡುವ ಉತ್ತರ ಕರ್ನಾಟಕ ಭಾಗದಲ್ಲಿ ಸಿದ್ಧತೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

DC Harish kumar
ಜಿಲ್ಲಾಧಿಕಾರಿ ಹರೀಶ್ ಕುಮಾರ್

By

Published : Oct 1, 2020, 5:33 PM IST

ಕಾರವಾರ (ಉ.ಕ): ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಗೆ ಅಕ್ಟೋಬರ್ 28ರಂದು ದಿನಾಂಕ ನಿಗದಿಗೊಳಿಸಿ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ. ಜಿಲ್ಲೆಯ 26 ಕೇಂದ್ರಗಳಲ್ಲಿ ಚುನಾವಣೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ್​​ ಕುಮಾರ್ ಮಾಹಿತಿ ನೀಡಿದ್ದಾರೆ.

ಪದವೀಧರ ಕ್ಷೇತ್ರದ ಚುನಾವಣೆ ಕುರಿತು ಜಿಲ್ಲಾಧಿಕಾರಿ ಹರೀಶ್ ಕುಮಾರ್ ಸುದ್ದಿಗೋಷ್ಠಿ

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಪಶ್ಚಿಮ ಪದವೀಧರರ ಕ್ಷೇತ್ರವು ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರಕನ್ನಡ ಜಿಲ್ಲೆಯನ್ನೊಳಗೊಂಡಿದ್ದು, ಬೆಳಗಾವಿಯ ಪ್ರಾದೇಶಿಕ ಆಯುಕ್ತರು ಚುನಾವಣಾಧಿಕಾರಿಯಾಗಿದ್ದಾರೆ. ಚುನಾವಣೆಗೆ ಅಕ್ಟೋಬರ್ 8 ನಾಮನಿರ್ದೇಶನಕ್ಕೆ ಕೊನೆಯ ದಿನವಾಗಿದ್ದು, ಅ. 9ರಂದು ಪರಿಶೀಲನೆ ನಡೆಯಲಿದೆ. ಹಾಗೂ ಅ.12 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.

ಇನ್ನು ನವೆಂಬರ್ 2ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ನ. 5ರಂದು ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದರು. ಇನ್ನು ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಚುನಾವಣೆಯನ್ನು ಕೆಲ ಸುರಕ್ಷಾ ಕ್ರಮದೊಂದಿಗೆ ನಡೆಸಲು ಆಯೋಗ ಮಾರ್ಗಸೂಚಿ ಹೊರಡಿಸಿದೆ. ಉಳಿದಂತೆ ಚುನಾವಣಾ ನೀತಿ ಸಂಹಿತೆಯೂ ಈ ಹಿಂದಿನ ಚುನಾವಣೆಗಳಲ್ಲಿರುವಂತೆಯೇ ಇರಲಿದ್ದು, ಅಚ್ಚುಕಟ್ಟಾಗಿ ಚುನಾವಣೆ ನಡೆಸಲು ಈಗಾಗಲೇ ಸಕಲ ರೀತಿಯಲ್ಲಿಯೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಈ ಹಿಂದಿನ ಕಾಮಗಾರಿಗಳ ಕೆಲಸಕ್ಕೆ ಯಾವುದೇ ತೊಂದರೆ ಇಲ್ಲ. ಆದರೆ, ಹೊಸದಾಗಿ ಯಾವುದೇ ಟೆಂಡರ್ ಪ್ರಕ್ರಿಯೆ ನಡೆಸುವಂತಿಲ್ಲ. ಜತೆಗೆ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಆಮಿಷಗಳನ್ನು ಒಡ್ಡುವುದು ಕಂಡು ಬಂದಲ್ಲಿ ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ಈ ವೇಳೆ ಜಿಲ್ಲಾ ಪಂಚಾಯಿತಿ ಸಿಇಓ ಎಂ.ರೋಷನ್, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

ABOUT THE AUTHOR

...view details