ಕಾರವಾರ: ಸಂರಕ್ಷಿತಾರಣ್ಯ ಪ್ರದೇಶದ ಸಮೀಪದ ಗ್ರಾಮಗಳಲ್ಲೊಂದಾದ ಜೋಯಿಡಾ ತಾಲೂಕಿನ ನಂದಿಗದ್ದೆ ಗ್ರಾಮದಲ್ಲಿ ಇಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ನೇತೃತ್ವದ ತಂಡ ಗ್ರಾಮ ವಾಸ್ತವ್ಯ ಹೂಡಿ ನೂರಾರು ಸಮಸ್ಯೆಗಳನ್ನು ಹೊತ್ತು ಬಂದವರಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸುವ ಪ್ರಯತ್ನ ನಡೆಸಿತು.
ಜೋಯಿಡಾದಲ್ಲಿ ವಾಸ್ತವ್ಯ ಹೂಡಿದ ಡಿಸಿ ಮುಲ್ಲೈ ಮುಗಿಲನ್ ಸರ್ಕಾರದ ನಿರ್ದೇಶನದಂತೆ ಜಿಲ್ಲಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ ಇಂದು 2ನೇ ಬಾರಿಗೆ ಹಳ್ಳಿ ಕಡೆ ಮುಖ ಮಾಡಿತ್ತು. ದಟ್ಟ ಅರಣ್ಯ ಪ್ರದೇಶದ ಮಧ್ಯೆ ವಾಸಿಸುತ್ತಿರುವ ನಂದಿಗದ್ದಾದಲ್ಲಿ ಕಾರ್ಯಕ್ರಮದ ಉದ್ಘಾಟನೆ ಬಳಿಕ ಸಮಸ್ಯೆ ಆಲಿಸಲು ಮುಂದಾದ ಜಿಲ್ಲಾಧಿಕಾರಿಗಳಿಗೆ ಸಾಲು ಸಾಲಾಗಿ ಅರಣ್ಯ ಇಲಾಖೆ ಅಡೆತಡೆಗಳಿಂದಾಗಿ ಯೋಜನೆಗಳು ನೆನೆಗುದಿಗೆ ಬಿದ್ದ ಬಗ್ಗೆಯೇ ಹೆಚ್ಚಿನ ದೂರುಗಳು ಬಂದವು.
ನಂದಿಗದ್ದಾ ಗ್ರಾಮ ಸಂರಕ್ಷಿತಾರಣ್ಯ ಪ್ರದೇಶಕ್ಕೆ ಹೊಂದಿಕ್ಕೊಂಡಿರುವ ಇಲ್ಲಿನ ಹಳ್ಳಿಗಳಿಗೆ ತೆರಳಬೇಕೆಂದರೆ ಕಾಡಿನ ಮಧ್ಯೆಯೇ ತೆರಳಬೇಕಾಗಿದೆ. ಆದರೆ ಗ್ರಾಮ ಪಂಚಾಯಿತಿ ಸೇರಿದಂತೆ ವಿವಿಧ ಯೋಜನೆಗಳಿಂದ ಮಂಜೂರಾದ ರಸ್ತೆ, ಸೇತುವೆ, ಕಾಲು ಸಂಕ, ಮನೆ ಕಾಮಗಾರಿಗಳಿಗೆ ಅರಣ್ಯ ಇಲಾಖೆ ಅಡ್ಡಿಯಿಂದಾಗಿ ತೊಂದರೆಯಾಗುತ್ತಿರುವುದಾಗಿ ಜನರು ದೂರು ಸಲ್ಲಿಸಿದರು. ಇದರ ಹೊರತಾಗಿ ಜಾಬ್ ಕಾರ್ಡ್, ಆಧಾರ್, ಪಿಂಚಣಿಯನ್ನು ಅರ್ಹ ಫಲಾನುಭವಿಗಳಿಗೆ ಸ್ಥಳದಲ್ಲಿಯೇ ವಿತರಿಸಲಾಯಿತು.
ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ಎರಡನೇ ಬಾರಿ ಗ್ರಾಮ ವಾಸ್ತವ್ಯದ ಮೂಲಕ ಸರ್ಕಾರದ ಸವಲತ್ತುಗಳಿಂದ ವಂಚಿತರಾದವರನ್ನು ಪತ್ತೆ ಹಚ್ಚಿ ಸಿಗಬೇಕಾದ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಆದರೆ ನಂದಿಗದ್ದಾ ಗ್ರಾಮದಲ್ಲಿ ಅತಿ ಹೆಚ್ಚು ಅರಣ್ಯ ಇಲಾಖೆಗೆ ಸಂಬಂಧಿಸಿದ ಅರ್ಜಿಗಳೇ ಇದ್ದು, ಈ ಬಗ್ಗೆಯೂ ಗಮನ ಹರಿಸಿ ಸಾಧ್ಯವಿರುವ ಸಮಸ್ಯೆ ಬಗೆಹರಿಸಲಾಗುವುದು. ಅಲ್ಲದೆ ಪಿಂಚಣಿ, ಆಧಾರ್ ಸೇರಿದಂತೆ 90ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ವಿಲೇವಾರಿ ಮಾಡಲಾಗುತ್ತಿದೆ ಎಂದರು.