ಕಾರವಾರ: ಕೋವಿಡ್-19 ತಡೆಗಟ್ಟಲು ಜನರು ಮನೆಯಲ್ಲಿಯೇ ಇರಬೇಕೆಂದು ಜಿಲ್ಲಾಡಳಿತ ಸೂಚಿಸಿದೆ. ಅಗತ್ಯವಿದ್ದಲ್ಲಿ ಜೀವನಾವಶ್ಯಕ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ಹರೀಶ ಕುಮಾರ್ ತಿಳಿಸಿದ್ದಾರೆ.
ಜನರೊಂದಿಗೆ ಡಿಸಿ ಫೋನ್ ಇನ್ ಕಾರ್ಯಕ್ರಮ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇಂದು ಹಮ್ಮಿಕೊಂಡಿದ್ದ ವಾರ್ತಾ ಸ್ಪಂದನ-ನೇರ ಫೋನ್‍ಇನ್ ಕಾರ್ಯಕ್ರಮದಲ್ಲಿ ಜಿಲ್ಲೆಯ ಜನರ ಫೋನ್ ಕರೆಗಳಿಗೆ ಡಿಸಿ ಹಾಗೂ ಸಿಇಓ ಉತ್ತರಿಸಿದ್ರು. ಅನಾವಶ್ಯಕವಾಗಿ ಯಾರು ಕೂಡ ಹೊರಗೆ ಓಡಾಡಬಾರದು. ಓಡಾಡಿದರೇ ಅಂತಹ ವಾಹನ ಹಾಗೂ ಚಾಲಕನ ಪರವಾನಿಗೆ ರದ್ದು ಪಡಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಜಿಲ್ಲೆಯಾದ್ಯಂತ ಜೀವನಾವಶ್ಯಕ ಸಾಮಗ್ರಿಗಳ ಸಂಗ್ರಹವಿದ್ದು, ಅಗತ್ಯಬಿದ್ದಲ್ಲಿ ಮನೆ ಮನೆಗೆ ಪೂರೈಸುವ ವ್ಯವಸ್ಥೆಯನ್ನು ಕೂಡಾ ಜಿಲ್ಲಾಡಳಿತ ಮಾಡುತ್ತಿದೆ. ಜನರು ಯಾವುದೇ ಕಾರಣಕ್ಕೂ ಭಯಭೀತರಾಗಬಾರದು ಎಂದು ಕರೆ ಮಾಡಿದ ಅನೇಕರಿಗೆ ಡಿಸಿ ಸಲಹೆ ನೀಡಿದರು.
ಸಿದ್ದಾಪುರ ತಾಲೂಕಿನ ಕುರವಂತೆ, ಹೊಸಮಂಜು, ಬಿಳಗಿ ಗ್ರಾಮಗಲ್ಲಿ ಲಾಕ್‍ಡೌನ್ ಆಗುತ್ತಿಲ್ಲವೆಂಬ ಮಾತಿಗೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಎಂ ರೋಶನ್ ಅವರು, ಗ್ರಾಮೀಣ ಪ್ರದೇಶಗಳಿಗೂ ಕೂಡಾ ಲಾಕ್‍ಡೌನ್ ಅನ್ವಯಿಸುತ್ತಿದ್ದು, ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
ಫೋನ್ ಮಾಡಿದ್ದ ಜನರು ಪ್ರಮುಖವಾಗಿ ಜಿಲ್ಲೆಯಲ್ಲಿ ಚಿಕನ್ ಮಟನ್ ಶಾಪ್ ತೆರೆಯಲು ಏಕೆ ಅನುಮತಿ ನೀಡಿಲ್ಲಾ?, ಸಹಕಾರಿ ಸಂಘಗಳ ಸಾಲದ ಕಂತು ತುಂಬುವುದು ಹೇಗೆ? ಜೀವನಾವಶ್ಯಕ ವಸ್ತುಗಳನ್ನು ಆಮದು ಮಾಡಿಕೊಂಡು ಮಾರಾಟ ಮಾಡಲು ಅನುಮತಿ ಇದೆಯಾ?, ಬೆಂಗಳೂರಿನಿಂದ ಬಂದವರಿಗೆ ಏನು ವ್ಯವಸ್ಥೆ ಮಾಡಬೇಕು? ಕೆಲವು ಕಡೆ ಇನ್ನು ಲಾಕ್‍ಡೌನ್ ಆಗಿಲ್ಲಾ? ಮನೆಯಲ್ಲಿರುವವರಿಗೂ ಮಾಸ್ಕ್ ಅಗತ್ಯತೆ ಇದೆಯಾ ಎನ್ನವುದು ಸೇರಿ ಹಲವು ಪ್ರಶ್ನೆಗಳನ್ನು ಕೇಳಿ ತಮ್ಮ ಎಲ್ಲ ಸಂದೇಹಗಳನ್ನು ನಿವಾರಿಸಿಕೊಂಡರು.