ಶಿರಸಿ (ಉತ್ತರಕನ್ನಡ): ಖಾಸಗಿ ಶಾಲೆಯ 9-10ನೇ ತರಗತಿಯ ವಿದ್ಯಾರ್ಥಿನಿಯರು ತಮ್ಮ ಕೈಗೆ ಬರೆ ರೀತಿಯಲ್ಲಿ ಗಾಯ ಮಾಡಿಕೊಂಡಿರುವ ಘಟನೆ ಜಿಲ್ಲೆಯ ದಾಂಡೇಲಿಯಲ್ಲಿ ನಡೆದಿದೆ. ಶಾಲೆಯ 7 ರಿಂದ 9 ವಿದ್ಯಾರ್ಥಿನಿಯರು ಎಡಗೈ ತೋಳಿನ ಕೆಳಭಾಗದಲ್ಲಿ ಕುಯ್ದುಕೊಂಡಿದ್ದಾರೆ. ಅಂದಾಜು 10 ರಿಂದ 15 ಗಾಯದ ಗೆರೆಗಳು ಮೂಡಿವೆ. ಈ ಬೆಳವಣಿಗೆಯಿಂದ ಪೋಷಕರು ಆತಂಕಗೊಂಡಿದ್ದಾರೆ. ಘಟನೆ ಬೆಳಕಿಗೆ ಬಂದ ತಕ್ಷಣವೇ ಮುಖ್ಯೋಪಾಧ್ಯಾಯರು ಪಾಲಕರಿಗೆ ವಿಚಾರ ಮುಟ್ಟಿಸಿದ್ದಾರೆ. ದಾಂಡೇಲಿ ಪೊಲೀಸ್ ಠಾಣಾಧಿಕಾರಿಯ ಸಮ್ಮುಖದಲ್ಲಿ ವಿಚಾರಣೆ ನಡೆಯುತ್ತಿದೆ.
ಮುಖ್ಯೋಪಾಧ್ಯಾಯರು ಗಾಯ ಮಾಡಿಕೊಂಡಿರುವ ವಿದ್ಯಾರ್ಥಿನಿಯರನ್ನು ವಿಚಾರಿಸಿದ್ದು, ಒಬ್ಬೊಬ್ಬ ವಿದ್ಯಾರ್ಥಿನಿಯರು ಒಂದೊಂದು ಕಾರಣ ನೀಡಿದ್ದಾರೆ ಎಂದಿದ್ದಾರೆ. ಮಾನಸಿಕ ಖಿನ್ನತೆ ಅಥವಾ ಮನೆಯಲ್ಲಿನ ಸಮಸ್ಯೆ ಕಾರಣವೇ ಎಂಬುದನ್ನು ತನಿಖೆ ನಡೆಸಲಾಗುತ್ತಿದೆ.
ಮದ್ಯದ ಅಮಲಿನಲ್ಲಿ ಕತ್ತು ಕುಯ್ದುಕೊಂಡು ಸಾವು (ಇತ್ತೀಚಿನ ಘಟನೆಗಳು): ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿ ವಡ್ನಾಳ್ ರಾಜಣ್ಣ ಬಡಾವಣೆಯಲ್ಲಿ ಸೆಪ್ಟೆಂಬರ್ 8 ರಂದು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ವ್ಯಕ್ತಿಯೊಬ್ಬ ಮದ್ಯದ ಅಮಲಿನಲ್ಲಿ ಮೈ, ಕೈ ಮತ್ತು ಕತ್ತು ಕುಯ್ದುಕೊಂಡು ಸಾವನ್ನಪ್ಪಿದ್ದ. ಬಸವರಾಜ್ (31) ಮೃತಪಟ್ಟ ವ್ಯಕ್ತಿ. ಈತ ಕ್ಷೌರದ ಅಂಗಡಿಯಲ್ಲಿ ಬ್ಲೇಡ್ ತೆಗೆದುಕೊಂಡು ಮೈ, ಕೈ ಮತ್ತು ಕತ್ತು ಕೊಯ್ದುಕೊಂಡು ರಕ್ತ ಸುರಿಸಿಕೊಂಡು ಬೀದಿಬದಿ ತಿರುಗಾಡುತ್ತಿದ್ದ. ಇದನ್ನು ಗಮನಿಸಿದ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅತಿಯಾದ ರಕ್ತಸಾವ್ರದಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಮೂಲತಃ ಹರಿಹರ ತಾಲೂಕಿನ ನಿಟ್ಟೂರು ಗ್ರಾಮದವನಾಗಿದ್ದು ತಂದೆ, ತಾಯಿ ಇಬ್ಬರನ್ನೂ ಕಳೆದುಕೊಂಡಿದ್ದಾನೆ. ಚನ್ನಗಿರಿ ತಾಲೂಕಿನ ಸೋಮಶೆಟ್ಟಿಹಳ್ಳಿಯ ತಮ್ಮ ಅಕ್ಕನ ಮನೆಯಲ್ಲಿ ವಾಸವಾಗಿದ್ದನು ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಕೋಟಾದಲ್ಲಿ ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ