ಕಾರವಾರ(ಉತ್ತರ ಕನ್ನಡ): ಆನ್‌ಲೈನ್‌ನಲ್ಲಿ ಬ್ಯಾಂಕರ್ಗಳು ಎಂದು ಹೇಳಿ ಒಟಿಪಿ ಪಡೆದು ಹಣ ವಂಚನೆ ಮಾಡುವ ಬಗ್ಗೆ ಜನಕ್ಕೆ ಜಾಗೃತಿ ಮೂಡಿದ ನಂತರ ವಂಚಕರು ಕ್ರಮ ಬದಲಾಯಿಸಿದ್ದಾರೆ. ಹಣಕ್ಕಾಗಿ ಅವರು ದೇಶದ ಹೆಮ್ಮೆಯ ಯೋಧರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಕಾರವಾರದ ಲಲಿತ್ ಎಂಟರ್‌ಪ್ರೈಸರ್ಸ್ ಮಾಲೀಕ ಶುಭಂ ಕಳಸ ಎಂಬುವವರಿಗೆ ಕರೆ ಮಾಡಿದ ವ್ಯಕ್ತಿಯೋರ್ವ ಸಿಐಎಸ್‌ಎಫ್ ಯೋಧನೆಂದು ಹೇಳಿಕೊಂಡು ಪರಿಚಯ ಮಾಡಿಕೊಂಡಿದ್ದ. ತಾಲೂಕಿನ ಮಾಜಾಳಿಯ ಬಾವಳ್ ಗ್ರಾಮದ ಫಿಶರೀಸ್ ಶಾಲೆಗೆ 2,000 ಸಿಮೆಂಟ್ ಬ್ಲಾಕ್ಸ್ ಬೇಕಿದೆ ಎಂದು ಹೇಳಿದ್ದ ವಂಚಕ, ಶಾಲೆಯ ವಿಳಾಸದ ಗೂಗಲ್ ಮ್ಯಾಪ್ ಕೂಡ ಕಳುಹಿಸಿ ಫೋನ್ ಪೇ ಮೂಲಕ ಹಣ ಸಂದಾಯ ಮಾಡುವುದಾಗಿ ನಂಬಿಸಿದ್ದಾನೆ.
ಈತನ ಮಾತು ನಂಬಿದ ಉದ್ಯಮಿ ಶುಭಂ ತಮ್ಮ ಟ್ರಕ್ ಮೂಲಕ ಸಿಮೆಂಟ್ ಬ್ಲಾಕ್‌ಗಳನ್ನ ಕಳುಹಿಸಿಕೊಟ್ಟಿದ್ದಾರೆ. ಬ್ಲಾಕ್‌ಗಳು ಶಾಲೆಗೆ ತೆರಳುವಷ್ಟರೊಳಗೆ ಸೇನೆಯ ಸಿಬ್ಬಂದಿ ಎಂದು ಹೇಳಿಕೊಂಡು ಕರೆ ಮಾಡಿದಾತ ಬ್ಲಾಕ್‌ಗಳ ಹಣ ಸಂದಾಯ ಮಾಡಲು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಒಂದು ರೂಪಾಯಿ ಕಳುಹಿಸುವಂತೆ ತಿಳಿಸಿದ್ದಾರೆ. ಶುಭಂ ಕೂಡ ಸ್ಕ್ಯಾನ್ ಮಾಡಿ ಹಣ ಹಾಕಿದ್ದಾರೆ. ಈ ವೇಳೆ ಲೋಡ್ ತೆಗೆದುಕೊಂಡು ತೆರಳಿದ್ದ ಲಾರಿ ಚಾಲಕ ಕರೆಮಾಡಿ ಶಾಲೆಗೆ ಯಾವುದೇ ಸಿಮೆಂಟ್ ಬ್ಲಾಕ್‌ಗಳ ಅವಶ್ಯಕತೆ ಇಲ್ಲ ಎಂದು ಹೇಳುತ್ತಿರುವುದಾಗಿ ತಿಳಿಸಿದ್ದಾನೆ.