ಕರ್ನಾಟಕ

karnataka

ETV Bharat / state

ತೆನೆಯೊಡೆಯುವ ಹೊತ್ತಿಗೆ ಭತ್ತಕ್ಕೆ ರೋಗ ಬಾಧೆ: ಬರದ ನಡುವೆ ಸಂಕಷ್ಟದಲ್ಲಿ ಅನ್ನದಾತರು! - ಕರಿಜೀಗಿ ರೋಗ

ಕಾರವಾರದಲ್ಲಿ ರೈತರು ಬರದಿಂದ ಸಂಕಷ್ಟ ಎದುರಿಸಿ ಇದೀಗ ಬೆಳೆದು ನಿಂತ ಬೆಳೆಗೆ ರೋಗ ತಗುಲಿದ್ದು, ಕಂಗಾಲಾಗಿದ್ದಾರೆ.

ರೋಗ ಬಾಧೆ
ರೋಗ ಬಾಧೆ

By ETV Bharat Karnataka Team

Published : Oct 13, 2023, 10:46 AM IST

Updated : Oct 13, 2023, 11:03 AM IST

ಕಾರವಾರದಲ್ಲಿ ತೆನೆಯೊಡೆಯುವ ಹೊತ್ತಿಗೆ ಭತ್ತಕ್ಕೆ ರೋಗ ಬಾಧೆ

ಕಾರವಾರ: ಮುಂಗಾರು ತಡವಾದರೂ ಕೊನೆಗಳಿಗೆಯಲ್ಲಿ ಬಿದ್ದ ಅಲ್ಪಸ್ವಲ್ಪ ಮಳೆಯಲ್ಲಿಯೇ ರೈತರು ಕೃಷಿ ಚಟುವಟಿಕೆ ಮುಗಿಸಿದ್ದರು. ಆದರೆ, ಮಳೆ ಕೊರತೆಯಿಂದಾಗಿ ತೀವ್ರ ಬರ ಪರಸ್ಥಿತಿ ಎದುರಿಸುತ್ತಿರುವ ರೈತರಿಗೆ ಇದೀಗ ಇದ್ದ ಬೆಳೆಗೂ ಬೆಂಕಿ ರೋಗ ಹಾಗೂ ಕರಿಜೀಗಿ ರೋಗ ಕಾಣಿಸಿಕೊಂಡಿರುವುದು ರೈತರಲ್ಲಿ ಆತಂಕ ಹೆಚ್ಚಿಸುವಂತೆ ಮಾಡಿದೆ.

ಹೌದು ಉತ್ತರಕನ್ನಡ ಜಿಲ್ಲೆಯಲ್ಲಿ ಈ ಭಾರಿ ಮುಂಗಾರು ಕೈಕೊಟ್ಟ ಕಾರಣದಿಂದಾಗಿ ಸರಿಯಾದ ಸಮಯಕ್ಕೆ ಕೃಷಿ ಚಟುವಟಿಕೆ ನಡೆಯಲಿಲ್ಲ. ಕೊನೆಗಳಿಯಲ್ಲಿ ಸುರಿದ ಅಲ್ಪಸ್ವಲ್ಪ ಮಳೆಗೆ ಕೃಷಿ ಚಟುವಟಿಕೆ ನಡೆಸಲಾಗಿತ್ತಾದರೂ ಬಳಿಕ ತೀವ್ರ ಮಳೆ ಕೊರತೆಯಿಂದಾಗಿ ನಾಟಿ ಮಾಡಿದ ಭತ್ತದ ಗದ್ದೆಗಳು ನೀರಿಲ್ಲದೇ ಒಣಗುವಂತಾಗಿತ್ತು. ಇದೇ ಕಾರಣಕ್ಕೆ ಕೆಲವರು ಗದ್ದೆ ಒಣಗದಂತೆ ಕೊಳವೆ ಭಾವಿ ನೀರು ಹರಿಸಿಕೊಂಡು ಇದ್ದ ಬೆಳೆ ರಕ್ಷಿಸಿಕೊಂಡಿದ್ದರು.

ಆದರೆ, ಇದೀಗ ಭಾರಿ ಮಳೆ ಕೊರತೆಯಿಂದಾಗಿ ಉತ್ತರಕನ್ನಡ ಜಿಲ್ಲೆಯಲ್ಲಿ ಬಿಸಿಲಿನ ತಾಪ ಕೂಡ ಹೆಚ್ಚಾಗಿದ್ದು, ಬಹುತೇಕ ಗದ್ದೆಗಳು ಒಣಗಿ ಹೋಗಿವೆ. ಜಿಲ್ಲೆಯ 9 ತಾಲೂಕುಗಳನ್ನು ಇಲಾಖೆ ವರದಿಯಂತೆ ಸರ್ಕಾರ ಬರ ಪೀಡಿತ ತಾಲೂಕುಗಳು ಎಂದು ಘೋಷಣೆ ಮಾಡಿದೆ. ಇದೀಗ ಕಳೆದ ಕೆಲ ದಿನಗಳಿಂದ ಬಿಸಿಲು ಹಾಗೂ ಮೋಡದ ವಾತಾವರಣಕ್ಕೆ ಬೆಂಕಿ ರೋಗ ಹಾಗೂ ಕರಿಜೀಗಿ ರೋಗ ಕಾಣಿಸಿಕೊಳ್ಳತೊಡಗಿದೆ. ಇನ್ನೇನು ತೆನೆ ಒಡೆಯಬೇಕು ಎನ್ನುವಾಗಲೇ ಭತ್ತದ ಬೆಳೆಗೆ ಈ ರೀತಿ ರೋಗ ಭಾದೆಗೆ ತುತ್ತಾಗಿರುವುದು ರೈತರನ್ನು ಕಂಗಾಲು ಮಾಡಿದೆ.

ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಸುಮಾರು 44 ಸಾವಿರ ಹೆಕ್ಟೇರ್​ ಪ್ರದೇಶದಲ್ಲಿ ಭತ್ತ, 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆ ಜೋಳವನ್ನು ಬೆಳೆದಿದ್ದಾರೆ. ಆದರೆ ಅಂಕೋಲ, ಶಿರಸಿ, ಬನವಾಸಿ, ಕುಮಟಾ, ಮುಂಡಗೋಡ, ಹಳಿಯಾಳ ಭಾಗದಲ್ಲಿ ಭತ್ತದ ಬೆಳೆಗೆ ಬೆಂಕಿ ಗಾಳಿ ರೋಗ ಕಾಣಿಸಿಕೊಂಡಿದ್ದು, ಸಾವಿರಾರು ಎಕರೆ ಭತ್ತದ ಬೆಳೆ ಒಣಗಿ ನಿಂತಿದೆ. ಲಕ್ಷಾಂತರ ರೂಪಾಯಿ ಬ್ಯಾಂಕ್​ಗಳಲ್ಲಿ ಸಾಲ ಮಾಡಿ ಬೆಳೆ ಬೆಳೆದವರಿಗೆ ಇದೀಗ ಆತಂಕ ಹೆಚ್ಚಾಗಿದೆ. ಕಳೆದೊಂದು ತಿಂಗಳ ಹಿಂದೆ ಬನವಾಸಿ ಭಾಗದ ರೈತರೊಬ್ಬರು ಬೆಳೆ ಹಾನಿಯಾಗಿದ್ದಕ್ಕೆ ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಸರ್ಕಾರ ಈ ಸಂಬಂಧ ಇಲಾಖೆ ರೈತರಿಗೆ ಪರಿಹಾರೋಪಾಯದ ಬಗ್ಗೆ ತಿಳಿಸಿ ಧೈರ್ಯ ತುಂಬಬೇಕಿದೆ. ಅಲ್ಲದೇ ರೈತರಿಗೆ ಆಗಿರುವ ಹಾನಿಗೆ ಸರ್ಕಾರ ಬೆನ್ನೆಲುಬಾಗಿ ನಿಲ್ಲಬೇಕು ಎಂದು ಕಾರವಾರ ಖಾರ್ಗಾದ ರೈತರಾದ ರವಿ ಕಸಬೇಕರ್ ಆಗ್ರಹಿಸಿದ್ದಾರೆ. ಜಿಲ್ಲೆಯಲ್ಲಿ ಬೆಂಕಿ ರೋಗ ಪ್ರತಿ ವರ್ಷದಂತೆ ಈ ವರ್ಷವೂ ಕಾಣಿಸಿಕೊಂಡಿದೆ. ಆದರೆ, ಈ ಭಾರಿ ಸರಿಯಾಗಿ ಮಳೆಯಾಗದ ಕಾರಣ ಇದರ ಪ್ರಮಾಣ ಹೆಚ್ಚಾಗಿದೆ.

ಈಗಾಗಲೇ ಒಣ ಬೇಸಾಯದ ಬೆಳೆ ಶೇಕಡಾ 90 ರಷ್ಟು ಹಾನಿಯಾಗಿದೆ. ಜಿಲ್ಲೆಯ 10 ತಾಲೂಕುಗಳನ್ನು ಬರ ಪೀಡಿತ ಎಂದು ಸರ್ಕಾರ ಘೋಷಣೆ ಮಾಡಿದೆ. ಹೀಗಾಗಿ ಪರಿಹಾರ ನೀಡುವ ನಿರೀಕ್ಷೆ ಇದೆ ಎಂದು ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪ ಗೌಡ ಮಾಹಿತಿ ನೀಡಿದ್ದಾರೆ. ಒಟ್ಟಾರೆ ಆರಂಭದಲ್ಲಿ ಮಳೆಯಾಗದೇ ತೀವ್ರ ತೊಂದರೆ ಅನುಭವಿಸಿದ್ದ ಜಿಲ್ಲೆಯ ರೈತರು ಇದೀಗ ಬೆಳೆಗಳಿಗೆ ರೋಗ ವಕ್ಕರಿಸಿದ ಕಾರಣ ಇದ್ದ ಬೆಳೆಯನ್ನು ಕಳೆದುಕೊಳ್ಳುವ ಆತಂಕ ಶುರುವಾಗಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಿ ಹಾನಿಗೊಳಗಾದ ಬೆಳೆಗೆ ಸೂಕ್ತ ಪರಿಹರ ಕಲ್ಪಿಸಬೇಕು ಎಂಬ ಒತ್ತಾಯ ಕೂಡ ಕೇಳಿ ಬಂದಿದೆ.

ಇದನ್ನೂ ಓದಿ:ರಾಜ್ಯದಲ್ಲಿ ಬರ: ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಿಂದ 21 ತಾಲೂಕುಗಳ ಪಟ್ಟಿ ಬಿಡುಗಡೆ

Last Updated : Oct 13, 2023, 11:03 AM IST

ABOUT THE AUTHOR

...view details