ಕರ್ನಾಟಕ

karnataka

ETV Bharat / state

ದಾಂಡೇಲಿಯಲ್ಲಿ ಹೆಚ್ಚಾದ ಮೊಸಳೆ ದಾಳಿ: ಒಂದೇ ವರ್ಷದಲ್ಲಿ ಐದು ಮಂದಿ ಬಲಿ

ದಾಂಡೇಲಿಯ ಕಾಳಿ ನದಿಯಲ್ಲಿ ಮೊಸಳೆಗಳ ಸಂಖ್ಯೆ ಹೆಚ್ಚಾಗಿದ್ದು, ಈವರೆಗೆ ಐವರನ್ನು ಬಲಿ ಪಡೆದಿವೆ. ಮೊಸಳೆಗಳು ಈ ಭಾಗದಲ್ಲಿ ಮೂರು ಪಟ್ಟು ಹೆಚ್ಚಾದ ಕಾರಣ ಈ ಭಾಗದಲ್ಲಿ ಮೊಸಳೆ ಹಾವಳಿ ಕುರಿತು ಹೆಚ್ಚಿನ ಅಧ್ಯಯನ ನಡೆಸಿ ಹೆಚ್ಚುವರಿ ಮೊಸಳೆಗಳನ್ನು ಸ್ಥಳಾಂತರ ಮಾಡಬೇಕು ಎಂದು ಇಲ್ಲಿನ ಜನರು ಆಗ್ರಹಿಸಿದ್ದಾರೆ.

Crocodile attacks on the rise in Dandeli
ದಾಂಡೇಲಿಯಲ್ಲಿ ಹೆಚ್ಚಾದ ಮೊಸಳೆ ದಾಳಿ

By

Published : Nov 15, 2022, 5:35 PM IST

ಉತ್ತರ ಕನ್ನಡ (ಕಾರವಾರ):ದಾಂಡೇಲಿ ಪ್ರವಾಸಿಗರ ಕಣ್ಮಣಿ. ಪ್ರತಿನಿತ್ಯ ಸಾವಿರಾರು ಪ್ರವಾಸಿಗರನ್ನು ತನ್ನೆಡೆಗೆ ಆಕರ್ಷಿಸುತ್ತದೆ. ಪ್ರಕೃತಿ ಸೌಂದರ್ಯ ಸವಿಯೋದಕ್ಕೆ ಅಂತಾನೇ ದೇಶ ವಿದೇಶದಿಂದ ಪ್ರವಾಸಿಗರು ಆಗಮಿಸಿ ಕಾಳಿ ನದಿಯ ಬಳಿ ರೆಸಾರ್ಟ್​ನಲ್ಲಿ ತಂಗಲು, ಜಲಸಾಹಸ ಕ್ರೀಡೆಗಳನ್ನು ಆಡಲು ಬಯಸುತ್ತಾರೆ. ಆದರೆ ಇದೀಗ ಕಾಳಿ ನದಿಯಲ್ಲಿ ಜನರು ಇಳಿಯುವುದಕ್ಕೆ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹೌದು, ದಾಂಡೇಲಿ ನಗರದಲ್ಲಿ ಹರಿಯುವ ಕಾಳಿ ನದಿ ಇದೀಗ ಡೆಡ್ಲಿ ನದಿ ಎಂಬ ಕುಖ್ಯಾತಿಯನ್ನು ಪಡೆಯಲು ಹೊರಟಿದೆ. ಇದಕ್ಕೆ ಕಾರಣ ಕಳೆದ ಒಂದು ವರ್ಷದಲ್ಲಿ ಐವರನ್ನು ಮೊಸಳೆಗಳು ಬಲಿ ಪಡೆದಿರುವುದು. ಕಾಳಿ ನದಿಯಲ್ಲಿ ಮೊಸಳೆಗಳ ಸಂಖ್ಯೆ ಹೆಚ್ಚಾಗಿದ್ದು, ಪ್ರತಿನಿತ್ಯ ಈ ಭಾಗದ ಜನರು ನದಿಗಳಲ್ಲಿ ತಮ್ಮ ದಿನನಿತ್ಯದ ಕೆಲಸವನ್ನು ಮಾಡುತ್ತಾರೆ. ಹೀಗೆ ನದಿಗೆ ಇಳಿದಾಗ ಮೊಸಳೆಗಳು ತಕ್ಷಣ ದಾಳಿ ಮಾಡಿ ಎಳೆದೊಯ್ಯುತ್ತಿದ್ದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.

ದಾಂಡೇಲಿಯಲ್ಲಿ ಹೆಚ್ಚಾದ ಮೊಸಳೆ ದಾಳಿ

ಇನ್ನು, ಮೊಸಳೆ ದಾಳಿ ಪದೇ ಪದೇ ನಡೆಯುತ್ತಿದ್ದರೂ, ತಡೆಯುವ ಕೆಲಸ ಮಾಡಬೇಕಿದ್ದ ಸ್ಥಳೀಯ ಆಡಳಿತ ಮತ್ತು ಅರಣ್ಯ ಇಲಾಖೆ ಯಾವ ಕ್ರಮಕ್ಕೂ ಮುಂದಾಗುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ನದಿಗೆ ಅಂಗಡಿಗಳ ಮಾಂಸದ ತ್ಯಾಜ್ಯಗಳನ್ನು ಎಸೆಯುವ ಕಾರಣ ಇಂತಹ ಘಟನೆಗಳು ಹೆಚ್ಚಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಮೊಸಳೆಗಳು ಈ ಭಾಗದಲ್ಲಿ ಮೂರು ಪಟ್ಟು ಹೆಚ್ಚಾದ ಕಾರಣ ಈ ಭಾಗದಲ್ಲಿ ಮೊಸಳೆ ಹಾವಳಿ ಕುರಿತು ಹೆಚ್ಚಿನ ಅಧ್ಯಯನ ನಡೆಸಿ ಹೆಚ್ಚುವರಿ ಮೊಸಳೆಗಳನ್ನು ಸ್ಥಳಾಂತರ ಮಾಡಬೇಕು ಎಂಬುದು ಇಲ್ಲಿನ ಜನರ ಆಗ್ರಹವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಬಳಿ ಕೇಳಿದರೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ. ಆದರೆ ಜನರು ಎಚ್ಚೆತ್ತುಕೊಳ್ಳಬೇಕು. ಮೊಸಳೆ ಇರುವ ಜಾಗದಲ್ಲಿ ಜನರು ಹೋಗಬಾರದು ಎನ್ನುತ್ತಾರೆ. ಒಟ್ಟಾರೆಯಾಗಿ ಈ ಸಮಸ್ಯೆಗೆ ಆದಷ್ಟು ಬೇಗನೆ ಪರಿಹಾರ ಸಿಗಬೇಕಿದೆ. ಇಲ್ಲವಾದಲ್ಲಿ ಇನ್ನೂ ಹಲವು ಜೀವಗಳು ಬಲಿಯಾಗುವುದರಲ್ಲಿ ಸಂಶಯವಿಲ್ಲ.

ಇದನ್ನೂ ಓದಿ:ದಾಂಡೇಲಿಯಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿ ಎಳೆದೊಯ್ದ ಮೊಸಳೆ

ABOUT THE AUTHOR

...view details