ಕಾರವಾರ (ಉತ್ತರ ಕನ್ನಡ) :ಒಂದೇ ಕುಟುಂಬದ ಮೂವರ ಮೃತದೇಹ ಕಾರವಾರ ಹಾಗೂ ಗೋವಾ ಬಳಿ ಪತ್ತೆಯಾಗಿದ್ದು, ಹೆಂಡತಿ ಮಗನನ್ನು ಕೊಂದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಗೋವಾ ಮೂಲದ ಶ್ಯಾಮ್ ಪಾಟೀಲ್ (45), ಜ್ಯೋತಿ (38) ಇವರ 12 ವರ್ಷದ ಮಗ ಮೃತಪಟ್ಟವರಾಗಿದ್ದಾರೆ. ಜ್ಯೋತಿ ಹಾಗೂ ಅವರ ಮಗನ ಮೃತದೇಹ ಕಾರವಾರದ ದೇವಭಾಗ ಬೀಚ್ ಬಳಿ ಪತ್ತೆಯಾಗಿವೆ.
ಇನ್ನು ಶ್ಯಾಮ್ ಪಾಟೀಲ್ ಅವರ ಮೃತದೇಹ ಗೋವಾದ ಕುಕ್ಕಳ್ಳಿ ಪಾಡಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶ್ಯಾಮ್ ಪಾಟೀಲ್ ಶ್ಯಾಮ್ ಇಂಡಸ್ಟ್ರಿಯಲ್ ಕಂಪನಿ ಹೊಂದಿದ್ದು ಸಾಲ ಮಾಡಿಕೊಂಡಿದ್ದರು ಎನ್ನಲಾಗ್ತಿದೆ. ಇದೇ ಕಾರಣದಿಂದ ಹೆಂಡತಿ ಮಕ್ಕಳನ್ನು ಕಾರವಾರದ ಕಾಳಿನದಿಯಲ್ಲಿ ದೂಡಿ ತಾನು ಗೋವಾ ಬಳಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ದೇವಭಾಗದ ಬಳಿ ತೆರಳಿದ ಚಿತ್ತಾಕುಲ ಪೊಲೀಸರು ಮೃತದೇಹವನ್ನು ಜಿಲ್ಲಾ ಆಸ್ಪತ್ರೆ ಶೈತ್ಯಾಗಾರಕ್ಕೆ ಸಾಗಿಸಿದ್ದಾರೆ. ಈ ಬಗ್ಗೆ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆಗೆ ಶರಣಾದ ಯುವಕ: ಇನ್ನೊಂದೆಡೆ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸುಳ್ಯ ತಾಲೂಕಿನ ಉಬರಡ್ಕದಲ್ಲಿ ನಿನ್ನೆ (ಬುಧವಾರ) ನಡೆದಿತ್ತು. ಮೃತ ಯುವಕನನ್ನು ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ರವಿ ಎಂಬುದು ತಿಳಿದುಬಂದಿತ್ತು. ಈತ ಉಬರಡ್ಕ ಗ್ರಾಮದ ಬೆಳ್ರಂಪಾಡಿಯ ಮನೆಯೊಂದರಲ್ಲಿ ಕೆಲವು ದಿನಗಳಿಂದ ಕೆಲಸಕ್ಕಿದ್ದು, ಕುಡಿತದ ಚಟ ಹೊಂದಿದ್ದ ಎನ್ನಲಾಗಿತ್ತು.